ನ್ಯೂಯಾರ್ಕ್(ಸೆ.24): ಅಮೆರಿಕದ ಪ್ರತಿಷ್ಠಿತ ಟೈಮ್‌ ಮ್ಯಾಗಜೀನ್‌ನ 100 ಮಂದಿ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಲ್ಕನೇ ಬಾರಿ ಸ್ಥಾನ ಪಡೆದಿದ್ದಾರೆ. ಮೋದಿ ಜತೆ ಇನ್ನೂ ನಾಲ್ಕು ಮಂದಿ ಭಾರತೀಯರಾದ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ, 82 ವರ್ಷದ ಹೋರಾಟಗಾರ್ತಿ ಬಿಲ್ಕಿಸ್‌, ವೈರಾಲಜಿಸ್ಟ್‌ ರವೀಂದ್ರ ಗುಪ್ತಾ ಹಾಗೂ ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ಕೂಡ ಸ್ಥಾನ ಪಡೆದಿದ್ದಾರೆ.

ಜಾಗತಿಕ ನಾಯಕರ ಪೈಕಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂತಾದವರು ‘2020ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳು’ ಪಟ್ಟಿಯಲ್ಲಿದ್ದಾರೆ. 2018 ಮತ್ತು 2019ರಲ್ಲಿ ಮೋದಿ ಈ ಪಟ್ಟಿಯಲ್ಲಿರಲಿಲ್ಲ. ಆದರೆ, 2014ರಲ್ಲಿ ಅವರು ಪ್ರಧಾನಿಯಾದ ನಂತರ ಮೂರು ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಇದೀಗ ನಾಲ್ಕನೇ ಬಾರಿ ಸ್ಥಾನ ಪಡೆದಿದ್ದಾರೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಬಿಲ್ಕಿಸ್‌, ಏಡ್ಸ್‌ನಿಂದ ಜಗತ್ತಿನ ಎರಡನೇ ವ್ಯಕ್ತಿಯನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಲಂಡನ್ನಿನ ಯುನಿವರ್ಸಿಟಿ ಕಾಲೇಜಿನ ವೈರಾಲಜಿಸ್ಟ್‌ ಪ್ರೊ.ರವೀಂದ್ರ ಗುಪ್ತಾ, ಬಾಲಿವುಡ್‌ನ ಖ್ಯಾತ ಯುವ ನಟ ಆಯುಷ್ಮಾನ್‌ ಖುರಾನಾ ಹಾಗೂ ಗೂಗಲ್‌ ಮತ್ತು ಆಲ್ಫಾಬೆಟ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.