ಪ್ರಧಾನಿ ಗಿಫ್ಟ್ ಕೋಟಿ ಬೆಲೆಗೆ ಹರಾಜು ಇದೇ ಮೊದಲು ಮೋದಿಗೆ ಬಂದ ಉಡುಗೊರೆಗಳು ಕೋಟಿ ಕೋಟಿಗೆ ಬಿಡ್

ನವದೆಹಲಿ(ಸೆ.18): ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆ ಮತ್ತು ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದು, ಹಿಂದೆಂದೂ ಕಂಡುಕೇಳರಿಯದ ರೀತಿಯ ಭರ್ಜರಿ ಆರಂಭ ಸಿಕ್ಕಿದೆ.

ಬಾಕ್ಸರ್‌ ಲವ್ಲೀನಾ ಬಳಸಿದ ಬಾಕ್ಸಿಂಗ್‌ ಗ್ಲೋವ್ಸ್‌ಗೆ 1.92 ಕೋಟಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ನೀರಜ್‌ ಚೋಪ್ರಾ ಬಳಸಿದ ಜಾವೆಲಿನ್‌ಗೆ 1.55 ಕೋಟಿ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಸುಮಿತ್‌ ಅಂತಿಲ್‌ ಬಳಸಿದ ಜಾವೆಲಿನ್‌ಗೆ 1.08 ಕೋಟಿ ಮೊತ್ತದ ಬಿಡ್‌ ಸಲ್ಲಿಕೆಯಾಗಿದೆ.

ಪಿಎಂ ಮೋದಿಗೆ ಸಿಕ್ಕ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು: ನಮಾಮಿ ಗಂಗೆಗೆ ಹಣ ಬಳಕೆ!

ಇದು ಈ ಹಿಂದಿನ ಯಾವುದೇ ವರ್ಷ ಯಾವುದೇ ವಸ್ತುಗಳಿಗೆ ಸಲ್ಲಿಕೆಯಾದ ಬಿಡ್‌ಗಿಂತ ಭಾರೀ ಹೆಚ್ಚಿನ ಮೊತ್ತ ಎಂಬುದು ಗಮನಾರ್ಹ ವಿಷಯ. ಪ್ರಧಾನಿ ಮೋದಿಗೆ ನೀಡಲಾದ ಒಟ್ಟಾರೆ 1300ಕ್ಕೂ ಹೆಚ್ಚು ವಸ್ತುಗಳನ್ನು ಮಾರಾಟ ಮಾಡಲು ಸೆ.17ರ ಶುಕ್ರವಾರದಿಂದ ಅ.7ರವರೆಗೆ ಇ-ಹರಾಜು ಮೂಲಕ ಕೇಂದ್ರ ಸಂಸ್ಕೃತಿ ಸಚಿವಾಲಯ ಹರಾಜು ಆರಂಭಿಸಿದೆ.

ಇದಲ್ಲದೆ ಹಲವು ಶಿಲ್ಪಗಳು, ವರ್ಣಚಿತ್ರ, ಅಂಗವಸ್ತ್ರಗಳು ಕೂಡ ಮೊದಲ ದಿನವೇ ಹೆಚ್ಚಿನ ಬಿಡ್‌ ಪಡೆದುಕೊಂಡಿವೆ. ವಿಶೇಷವೆಂದರೆ ಈ ವರ್ಷ ಒಲಿಂಪಿಕ್ಸ್‌ ಮುಗಿದ ಬಳಿಕ ಕ್ರೀಡಾಪಟುಗಳು ಮೋದಿಗೆ ನೀಡಿದ ಉಪಕರಣಗಳಿಗೆ ಅಚ್ಚರಿಯ ರೀತಿಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈ ಹಿಂದಿನ ವರ್ಷ ಅಶೋಕ ಸ್ತಂಭದ ಪ್ರತಿಕೃತಿಗೆ 13 ಲಕ್ಷ ರು. ಬಂದಿದ್ದೇ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು.

ಕೋಟಿ ಕೋಟಿ ಹಣ:

ಬಾಕ್ಸರ್‌ ಲವ್ಲೀನಾ ಬಳಸಿದ ಬಾಕ್ಸಿಂಗ್‌ ಗ್ಲೋವ್‌್ಸಗೆ 1.92 ಕೋಟಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ನೀರಜ್‌ ಚೋಪ್ರಾ ಬಳಸಿದ ಜಾವೆಲಿನ್‌ಗೆ 1.55 ಕೋಟಿ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಸುಮಿತ್‌ ಅಂತಿಲ್‌ ಬಳಸಿದ ಜಾವೆಲಿನ್‌ಗೆ 1.08 ಕೋಟಿ, ಮಹಿಳಾ ಹಾಕಿ ತಂಡದ ಸದಸ್ಯರ ಸಹಿ ಇರುವ ಹಾಕಿ ಬ್ಯಾಟ್‌ಗೆ 1 ಕೋಟಿ ಲಭಿಸಿದೆ.

ಪಿ.ವಿ. ಸಿಂಧು ಬಳಸಿದ ಬ್ಯಾಡ್ಮಿಂಟನ್‌ ರಾಕೆಟ್‌ ಮತ್ತು ಬ್ಯಾಗ್‌ಗೆ 90.02 ಲಕ್ಷ, 500 ರು. ಮೂಲ ಬೆಲೆ ಇದ್ದ ಕೇಸರಿ ಅಂಗವಸ್ತ್ರಕ್ಕೆ 1 ಕೋಟಿಗೆ ತಲುಪಿದೆ. ಹರಾಜಿನಿಂದ ಬಂದ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ.