ಬಾಂಗ್ಲಾ ವಿಮೋಚನೆ ಪ್ರತಿಭಟನೆಯಲ್ಲಿ ಜೈಲು ಸೇರಿದ್ದೆ; ಮೊದಲ ಹೋರಾಟ ನೆನಪಿಸಿದ ಮೋದಿ!
ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ರಾಜಕೀಯ ಹೋರಾಟ ಹಾಗೂ ಪ್ರತಿಭಟನೆಯನ್ನು ನೆನಪಿಸಿದ್ದಾರೆ. ಈ ಕುರಿತ ರೋಚಕ ಅನುಭವವನ್ನು ಬಾಂಗ್ಲಾ ಜನತೆ ಮುಂದಿ ತೆರೆದಿಟ್ಟಿದ್ದಾರೆ.
ಢಾಕಾ(ಮಾ.26): ಪ್ರಧಾನಿ ನರೇಂದ್ರ ಮೋದಿ 2 ದಿನದ ಬಾಂಗ್ಲಾದೇಶ ಪ್ರವಾಸದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡ ಮೋದಿ, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಮೋದಿ ತಮ್ಮ ರಾಜಕೀಯ ಜೀವನದ ಮೊದಲ ಹೋರಾಟ ಹಾಗೂ ಬಾಂಗ್ಲಾದೇಶ ವಿಮೋಚನೆ ಕುರಿತು ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ.
ಬಾಂಗ್ಲಾದೇಶ ಯವಕರಿಗೆ ಸ್ವರ್ಣ ಜಯಂತಿ ವಿದ್ಯಾರ್ಥಿ ವೇತನ ಘೋಷಿಸಿದ ಮೋದಿ!
20ನೇ ವಯಸ್ಸಿನಲ್ಲಿದ್ದಾಗ ಬಾಂಗ್ಲಾದೇಶ ವಿಮೋಚನೆಗಾಗಿ ನಾನು ಧುಮಿಕಿದ್ದೆ. ಈ ಹೋರಾಟ ನನ್ನ ರಾಜಕೀಯ ಜೀವನದ ಮೊದಲ ಹೋರಾಟವಾಗಿತ್ತು. ಈ ಹೋರಾಟದಿಂದ ನಾನು ಜೈಲು ಸೇರಿದ್ದೆ ಎಂದು ಮೋದಿ 50 ವರ್ಷಗಳ ಹಿಂದಿನ ಹೋರಾಟ ಜೀವನ ಕತೆಯನ್ನು ಹೇಳಿದ್ದಾರೆ.
ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾ ಸೈನಿಕರ ತ್ಯಾಗವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅಷ್ಟೇ ಮುಖ್ಯವಾಗಿ ನೆರೆ ರಾಷ್ಟ್ರಕ್ಕಾಗಿ ಭಾರತೀಯ ಸೈನಿಕರ ತ್ಯಾಗ ಬಲಿದಾನಗಳನ್ನು ನೆನಪಿಸಲೇಬೇಕು ಎಂದು ಮೋದಿ ಹೇಳಿದ್ದಾರೆ. ಅಂದಿನ ಹೋರಾಟದಲ್ಲಿ ನಾನು ಪಾಲ್ಗೊಂಡಿದ್ದೆ ಎಂದು ಹೇಳಲು ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ.
50 ವರ್ಷಗಳ ಹಿಂದಿನ ಹೋರಾಟ ಇದೀಗ ಬಾಂಗ್ಲಾದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ. ಭಾರತ ಹಾಗೂ ಬಾಂಗ್ಲಾದೇಶ ಜಂಟಿಯಾಗಿ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಜಂಟಿಯಾಗಿ ಹೋರಾಡಲಿದೆ. ಮುಂದಿನ 25 ವರ್ಷ ಉಭಯ ದೇಶಕ್ಕೆ ನಿರ್ಣಾಯಕವಾಗಿದೆ ಎಂದು ಮೋದಿ ಹೇಳಿದ್ದಾರೆ.