ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳ ಮಳೆ ಸುರಿ ಸುವ ರಾಜಕೀಯ ಪಕ್ಷಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. 

ನವದೆಹಲಿ (ಮಾ.21): ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳ ಮಳೆ ಸುರಿ ಸುವ ರಾಜಕೀಯ ಪಕ್ಷಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಮೊದಲ ಹಂತದ ಲೋಕಸಭೆ ಚುನಾವಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಉಚಿತ ಕೊಡುಗೆ ಘೋಷಣೆಗಳು ಅಸಾಂವಿಧಾನಿಕವಾಗಿವೆ. ಹೀಗಾಗಿ ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 

ಉಚಿತ ಘೋಷಣೆಗಳನ್ನು ಪ್ರಕಟಿಸುವ ರಾಜಕೀಯ ಪಕ್ಷಗಳ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡು, ಅಂತಹ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಹಿರಿಯ ವಕೀಲ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಮೊದಲೇ ವಿಚಾರಣೆ ನಡೆಸಬೇಕು ಎಂದು ಬುಧವಾರ ನ್ಯಾಯಾಲಯದಲ್ಲಿ ಉಪಾಧ್ಯಾಯ ಅವರ ಪರವಕೀಲರು ಕೋರಿದರು. 'ಇದು ಮುಖ್ಯವಾದುದು. ನಾಳೆ ವಿಚಾರಣೆ ನಡೆಸುತ್ತೇವೆ' ಎಂದುಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಭರವಸೆ ನೀಡಿತು.

ರಾಮ್‌ದೇವ್‌, ಬಾಲಕೃಷ್ಣ ಹಾಜರಿಗೆ ಆದೇಶ: ಪತಂಜಲಿ ಕಂಪನಿಯ ಜಾಹೀರಾತು ಮತ್ತು ಅವುಗಳ ಸಾಮರ್ಥ್ಯದ ಕುರಿತಾದ ತನ್ನ ಆದೇಶ ಪಾಲಿಸಲು ವಿಫಲವಾದ ಪ್ರಕರಣದಲ್ಲಿ ತನ್ನ ಮುಂದೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಯೋಗ ಗುರು ಬಾಬಾ ರಾಮ್‌ದೇವ್‌ ಮತ್ತು ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಕೋರ್ಟ್‌ಗೆ ನೀಡಿದ ಮುಚ್ಚಳಿಕೆ ಪಾಲನೆ ಮಾಡಲು ವಿಫಲವಾದ ಪ್ರಕರಣದಲ್ಲಿ ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂಬುದಕ್ಕೆ ಸ್ಪಷ್ಟನೆ ನೀಡಿ ಎಂದು ಇಬ್ಬರಿಗೂ ನ್ಯಾಯಾಲಯ ಕೆಲ ದಿನಗಳ ಹಿಂದೆ ನೋಟಿಸ್‌ ಜಾರಿ ಮಾಡಿತ್ತು. ಆದರೆ ಇದಕ್ಕೆ ಇಬ್ಬರೂ ಯಾವುದೇ ಉತ್ತರ ನೀಡುವಲ್ಲಿ ವಿಫಲವಾದ ಕಾರಣ ನ್ಯಾಯಾಲಯ ಇಬ್ಬರ ಖುದ್ದು ಹಾಜರಾತಿಗೆ ಆದೇಶಿಸಿದೆ.

ಬರ ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿ ಇಲ್ಲ: ಚುನಾವಣಾಧಿಕಾರಿ ವೆಂಕಟೇಶ್‌ ಕುಮಾರ್‌

ಚುನಾವಣಾ ಬಾಂಡ್‌ ಖರೀದಿ ವಿವರ ಕೋರಿ ಅರ್ಜಿ: 2018ರ ಮಾ.1ರಿಮದ 2019ರ ಏಪ್ರಿಲ್‌ವರೆಗೂ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನೂ ಬಹಿರಂಗಪಡಿಸುವಂತೆ ಸಿಟಿಜನ್‌ ರೈಟ್ಸ್‌ ಟ್ರಸ್ಟ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ಸಲ್ಲಿಸಿರುವ ಮಾಹಿತಿಯಲ್ಲಿ ಮೇಲ್ಕಂಡ ಅವಧಿಯ ಮಾಹಿತಿ ಸೇರಿಲ್ಲ. ಈ ಅವಧಿಯಲ್ಲಿ 4,002 ಕೋಟಿ ಮೌಲ್ಯದ 9,152 ಬಾಂಡ್‌ಗಳು ಮಾರಾಟವಾಗಿದ್ದು, ಇವುಗಳ ವಿವಿರಗಳನ್ನು ಬಹಿರಂಗ ಪಡಿಸುವಂತೆ ಟ್ರಸ್ಟ್‌ ನ್ಯಾಯಾಲಯವನ್ನು ಕೋರಿದೆ.