ನವದೆಹಲಿ(ಜೂ.09): ದೇಶಾದ್ಯಂತ ಕೊರೋನಾ ಪ್ರಕರಣಗಳ ಅಬ್ಬರದ ಮಧ್ಯೆ ಅತ್ತ ರಾಜಕೀಯ ಬೆಳವಣಿಗೆಗಳೂ ಯಾವುದೇ ತಡೆ ತಡೆ ಇಲ್ಲದೇ ನಡೆಯುತ್ತಿವೆ. ಪಂಚ ರಾಜ್ಯ ಚುನಾವಣೆಸಂದರ್ಭದಲ್ಲಿ ಬಹುದೊಡ್ಡ ಹೊಡೆತಕ್ಕೊಳಗಾದ ಕಾಂಗ್ರೆಸ್‌ಗೆ ಇದೀಗ ಮತ್ತೆ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಶಾಕಿಂಗ್ ಸುದ್ದಿ ಲಭಿಸಿದೆ. ಹೌದು ಮಾಜಿ ಸಚಿವ ಹಾಗೂ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಹಲವಾರು ಊಹಾಪೋಹಗಳ ನಡುವೆಯೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತಿಯಲ್ಲಿ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಿತಿನ್ ಪ್ರಸಾದ್ ಕೇಸರಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. 

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಯಾಗಲಿರುವುದು ದೇಶದ ಅತ್ಯಂತ ಹಳೇ ರಾಜಕೀಯ ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡಲಿದೆ. ಜಿತಿನ್ ಪ್ರಸಾದ್ ಉತ್ತರ ಪ್ರದೇಶದ ಬ್ರಾಹ್ಮಣ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಚುನಾವಣೆ ಹೊಸ್ತಿಲಲ್ಲಿ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಕಮಲ ಪಾಳಯಕ್ಕೆ ಲಾಭ ತಂದು ಕೊಡಲಿದೆ.

ಇನ್ನು ಜಿತಿನ್ ಪ್ರಸಾದ್ ಭಾರತದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿ ಹಾಗೂ ಪಿ. ವಿ. ನರಸಿಂಹರಾವ್‌ರವರ ರಾಜಕೀಯ ಸಲಹೆಗಾರ, ಕಾಂಗ್ರೆಸ್‌ ನಾಯಕ ಜಿತೇಂದ್ರ ಪ್ರಸಾದ್‌ರವರ ಪುತ್ರ ಎಂಬುವುದು ಉಲ್ಲೇಖನೀಯ. 

ಮೌನವಾಗಿದ್ದಾರೆ ಜಿತಿನ್:

ಜಿತಿನ್ ಕುಮಾರ್ ಮಾತ್ರ ಈವರೆಗೂ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲವಾದರೂ, ಜೂನ್ 5 ರಂದು ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಇದಾದ ಬಳಿಕದಿಂದಲೇ ಅವರು ಬಿಜೆಪಿಗೆ ಸೇರ್ಪಡೆಯಾಗುವ ಮಾತುಗಳು ಜೋರಾಗಿದ್ದವು.

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದರು

ಕಳೆದ ವರ್ಷ ಕಾಂಗ್ರೆಸ್‌ನ 23 ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂದು ಒತ್ತಾಯಿಸಿದ್ದರು. ಈ ನಾಯಕರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬ್ಬಲ್, ಮನೀಷ್ ತಿವಾರಿ, ಜಿತಿನ್ ಪ್ರಸಾದ್‌ರಂತಹ ನಾಯಕರೂ ಇದ್ದರು.