ನವದೆಹಲಿ: ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ ದೇಹಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಹಾಗೂ ಇಸಿಎಂಒ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮವಾಗಿದೆ.

"

ಪ್ರಣಬ್ ಆರೋಗ್ಯ ಮತ್ತಷ್ಟು ಕ್ಷೀಣ:

ಮೆದುಳಿನ ಶಸ್ತ್ರ ಚಿಕಿತ್ಸೆಗೆ ಗುರಿಯಾದ ಬಳಿಕ ಕೋಮಾಕ್ಕೆ ಜಾರಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಇದೀಗ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಗೊಂಡಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಸೇನಾ ಆಸ್ಪತ್ರೆ ತಿಳಿಸಿದೆ.

ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಅವರದೇ ಹಾಡುಗಳ ಮ್ಯೂಸಿಕ್‌ ಥೆರಪಿ!

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಪ್ರಣಬ್‌ರನ್ನು ಆ.10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿರುವುದೂ ದೃಢಪಟ್ಟಿತ್ತು. ಬಳಿಕ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ, ಅವರು ಇದ್ದಕ್ಕಿದ್ದಂತೆ ಕೋಮಾಕ್ಕೆ ಜಾರಿದ್ದರು. ಅಂದಿನಿಂದಲೂ ಅವರು ಕೋಮಾದಲ್ಲಿಯೇ ಇದ್ದಾರೆ.

ಎಸ್‌ಪಿಬಿ ಚೇತರಿಕೆ ಇಲ್ಲ: ವೆಂಟಿಲೇಟರ್‌ ಜೊತೆಗೆ ಇಸಿಎಂಒ ಅಳವಡಿಕೆ

ಚೆನ್ನೈ: ಕೋವಿಡ್‌ಗೆ ತುತ್ತಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಹಿನ್ನಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಗಂಭೀರಾಗಿಯೇ ಮುಂದುವರೆದಿದೆ. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಎಸ್‌ಪಿಬಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಗೆ ಜೊತೆಗೆ ಇಸಿಎಂಒ (ಎಕ್ಸ್‌ಟ್ರಾಕಾರ್ಪೊರಿಯಲ್‌ ಮೆಂಬ್ರೇನ್‌ ಆಕ್ಸಿಜನೇಷನ್‌ ಸರ್ಪೋರ್ಟ್‌- ಹೃದಯ ಮತ್ತು ಶ್ವಾಸಕೋಶ ಸಹಾಯ ವ್ಯವಸ್ಥೆ) ಯಂತ್ರ ಅಳವಡಿಸಲಾಗಿದೆ.

ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವ ರೀತಿ ಸಮಾಧಾನಕರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಕೊರೋನಾ ಪಾಸಿಟಿವ್‌ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ, 74 ವರ್ಷದ ಎಸ್‌ಪಿಬಿ ಅವರ ಆರೋಗ್ಯ ದಿಢೀರಣೆ ಕ್ಷೀಣಿಸಿತ್ತು.