Asianet Suvarna News Asianet Suvarna News

ದಕ್ಷಿಣ ಕನ್ನಡ ಡಿಸಿಯಾಗಿದ್ದ ಸೇಂಥಿಲ್‌ ಇಂದು ಕಾಂಗ್ರೆಸ್‌ಗೆ!

ದಕ್ಷಿಣ ಕನ್ನಡ ಡಿಸಿಯಾಗಿದ್ದ ಸೇಂಥಿಲ್‌ ಇಂದು ಕಾಂಗ್ರೆಸ್‌ಗೆ|-ಇಂದು ಚೆನ್ನೈನಲ್ಲಿ ದಿನೇಶ್‌ ಸಮ್ಮುಖದಲ್ಲಿ ಸೇರ್ಪಡೆ| ಅಣ್ಣಾಮಲೈ ಬಳಿಕ ಮತ್ತೊಬ್ಬ ಅಧಿಕಾರಿ ರಾಜಕೀಯಕ್ಕೆ| ಕಳೆದ ವರ್ಷ ಐಎಎಸ್‌ಗೆ ರಾಜಿನಾಮೆ ನೀಡಿದ್ದ ಸಸಿಕಾಂತ್‌ ಸೆಂಥಿಲ್‌| ಕಾಂಗ್ರೆಸ್‌ ಅತಿ ಹೆಚ್ಚು ಇತಿಹಾಸ ಇರುವ ದೊಡ್ಡ ಪಕ್ಷವಾಗಿದ್ದು, ಅದರ ಸ್ಥಾನದಲ್ಲಿ ಬೇರೆ ಪಕ್ಷ ಬರಲು ಸಾಧ್ಯವಿಲ್ಲ-ಸೇಂಥಿಲ್‌

Former IAS Officer Sasikanth Senthil To Join Tamil Nadu Congress On Monday pod
Author
Bangalore, First Published Nov 9, 2020, 7:25 AM IST

ಮಂಗಳೂರು

ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ಕಳೆದ ವರ್ಷ ರಾಜೀನಾಮೆ ಸಲ್ಲಿಸಿದ್ದ ಸಸಿಕಾಂತ್‌ ಸೆಂಥಿಲ್‌ ಇದೀಗ ಕಾಂಗ್ರೆಸ್‌ ಪಕ್ಷ ಸೇರಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಸೋಮವಾರ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಉಪಸ್ಥಿತಿಯಲ್ಲಿ ಸಸಿಕಾಂತ್‌ ಸೆಂಥಿಲ್‌ ಪಕ್ಷ ಸೇರ್ಪಡೆಯಾಗಲಿದ್ದು, ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಇತ್ತೀಚೆಗಷ್ಟೆಬಿಜೆಪಿ ಸೇರ್ಪಡೆಯಾಗಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌ ಸೇರುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಐಎಎಸ್‌ಗೆ ರಾಜಿನಾಮೆ ನೀಡಿದ ಬಳಿಕ ಸಸಿಕಾಂತ್‌ ಸೆಂಥಿಲ್‌ ದೇಶಾದ್ಯಂತ ಅನೇಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಆಗಲೇ ಅವರು ರಾಜಕೀಯ ಸೇರುವ ವದಂತಿ ಕೇಳಿಬಂದಿತ್ತು. ಆದರೆ ಸೆಂಥಿಲ್‌ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಈ ನಡುವೆ ಕಾಂಗ್ರೆಸ್‌ ಸೇರುವಂತೆ ಪಕ್ಷದ ವರಿಷ್ಠರು ಸೆಂಥಿಲ್‌ ಅವರಿಗೆ ಆಹ್ವಾನ ನೀಡಿದ್ದರು. ಇದೀಗ ಸೆಂಥಿಲ್‌ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ನನ್ನೊಬ್ಬನ ನಿರ್ಧಾರ ಅಲ್ಲ: ‘‘ನಾನು ಕಾಂಗ್ರೆಸ್‌ ಸೇರುವ ನಿರ್ಧಾರವನ್ನು ದಿಢೀರನೇ ಕೈಗೊಂಡಿದ್ದಲ್ಲ. ಅನೇಕ ತಿಂಗÜಳಿಂದ ಪ್ರಮುಖರು, ಸಹಚಿಂತಕರು ಸೇರಿ ಹಲವರೊಂದಿಗೆ ನಿರಂತರ ಚರ್ಚೆ ನಡೆಸಿದ ಬಳಿಕವೇ ಪಕ್ಷ ಸೇರಲು ತೀರ್ಮಾನಿಸಿದ್ದೇನೆ’’ ಎಂದು ಸೆಂಥಿಲ್‌ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ದೇಶ ಪ್ರಜಾಪ್ರಭುತ್ವ ವಿರೋಧಿ, ಬಹುತ್ವ ವಿರೋಧಿ ಆಡಳಿತದ ಕೈಯಲ್ಲಿದೆ. ಈ ಪರಿಸ್ಥಿತಿ ತಡೆಯಲು ಏನು ಮಾಡಬಹುದು ಅಂತ ರಾಜೀನಾಮೆ ಬಳಿಕ ಒಂದು ವರ್ಷದಿಂದ ಚಿಂತನೆ ನಡೆಸುತ್ತಿದ್ದೆ. ಇದರ ಭಾಗವಾಗಿಯೇ ದೇಶದ ಹಲವೆಡೆ ಜನಚಳವಳಿಗಳಲ್ಲಿ ಭಾಗವಹಿಸಿದೆ. ಇದರಿಂದ ತಿಳಿದುಬಂದಿದ್ದೆಂದರೆ, ಈ ಪ್ರಜಾಪ್ರಭುತ್ವ ವಿರೋಧಿ ಆಡಳಿತವನ್ನು ರಾಜಕೀಯ ಪಕ್ಷವನ್ನು ಬಿಟ್ಟು ತಡೆಯಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ಎಲ್ಲರೂ ಪ್ರಬಲ ಪಕ್ಷದೊಂದಿಗೆ ಕೈಜೋಡಿಸಬೇಕಾಗುತ್ತದೆ. ಕಾಂಗ್ರೆಸ್‌ ಅತಿ ಹೆಚ್ಚು ಇತಿಹಾಸ ಇರುವ ದೊಡ್ಡ ಪಕ್ಷವಾಗಿದ್ದು, ಅದರ ಸ್ಥಾನದಲ್ಲಿ ಬೇರೆ ಪಕ್ಷ ಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಹುಲ್‌ ಚಿಂತನೆ ಜನಪರ: ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ಬಂದಾಗ ಅಲ್ಲಿ ಹೆಚ್ಚು ಗಮನ ಹರಿಸುತ್ತೇನೆ. ಕರ್ನಾಟಕದಲ್ಲಿ ಚುನಾವಣೆ ಬರುವಾಗ ಇಲ್ಲಿ ಬರುತ್ತೇನೆ. ಇದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದ ಜತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ರಾಹುಲ್‌ ಗಾಂಧಿ ಚಿಂತನೆ ಜನರ ಬಗ್ಗೆ ಮತ್ತು ದೇಶದ ಭವಿಷ್ಯದ ಬಗ್ಗೆ ಕಾಳಜಿಪೂರ್ವಕವಾಗಿದೆ. ಪ್ರಜಾಪ್ರಭುತ್ವ ವಿರೋಧಿ ಆಡಳಿತದ ಬಗ್ಗೆ ಜನರು ಅರಿತುಕೊಳ್ಳುತ್ತಿದ್ದು ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಸೆಂಥಿಲ್‌ ಹೇಳಿದರು.

2009ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶದಲ್ಲಿ 9ನೇ ಸ್ಥಾನ ಪಡೆದು ಕರ್ನಾಟಕದಲ್ಲಿ ಆಡಳಿತಾತ್ಮಕ ಕರ್ತವ್ಯಕ್ಕೆ ಸೇರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಬಳಿಕ 2107ರ ಅಕ್ಟೋಬರ್‌ 10ಕ್ಕೆ ದ.ಕ. ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗಿದ್ದರು. ಅಲ್ಲಿಂದ ಸುಮಾರು 2 ವರ್ಷಗಳ ಕಾಲ ಇಲ್ಲೇ ಕಾರ್ಯ ನಿರ್ವಹಿಸಿದ್ದ ಅವರು ಕಳೆದ ವರ್ಷ ಸೆ.6ರಂದು ದಿಢೀರನೆ ರಾಜೀನಾಮೆ ನೀಡಿ ಗಮನ ಸೆಳೆದಿದ್ದರು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪತ್ರದಲ್ಲಿ ‘‘ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ. ದೇಶದ ಬಹುತ್ವಕ್ಕೆ ಇದರಿಂದ ಭವಿಷ್ಯದಲ್ಲಿ ಅಪಾಯವಿದ್ದು ಸೇವೆಯಿಂದ ಹೊರಗಿದ್ದೇ ಎಲ್ಲ ಜನರ ಒಳಿತಿಗಾಗಿ ದುಡಿಯುತ್ತೇನೆ’’ ಎಂದು ಉಲ್ಲೇಖಿಸಿದ್ದರು.

ಚುನಾವಣೆಯಲ್ಲಿ ಸ್ಪರ್ಧೆ?: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸೆಂಥಿಲ್‌ ಸ್ಪಷ್ಟವಾಗಿ ಏನೂ ತಿಳಿಸಿಲ್ಲ. ಆದರೆ ಪಕ್ಷ ಅವರನ್ನು ಸ್ಪರ್ಧೆಗಿಳಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios