* ಮಾಜಿ ಸಿಎಂ ಹರಿಶ್ ರಾವತ್ ಭದ್ರತೆಯಲ್ಲಿ ಲೋಪ* ರಾವತ್ ಇದ್ದ ವೇದಿಕೆಗೆ ಹತ್ತಿ ಚಾಕು ಹಿಡಿದು ಬೆದರಿಕೆ ಹಾಕಿದ ಯುವಕ* ಅದೃಷ್ಟವಶಾತ್ ಅಪಾಯದಿಂದ ಪಾರಾದ ರಾವತ್

ಡೆಹ್ರಾಡೂನ್(ಜ.07): ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಯುವಕನೊಬ್ಬ ಚಾಕು ಹಿಡಿದು ವೇದಿಕೆಯ ಮೇಲೆ ಹತ್ತಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅದೃಷ್ಟವಶಾತ್, ಈ ಘಟನೆಗೂ ಕೆಲ ನಿಮಿಷಗಳ ಮೊದಲು, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಉಸ್ತುವಾರಿ ಹರೀಶ್ ರಾವತ್ ವೇದಿಕೆಯಿಂದ ಕೆಳಗಿಳಿದಿದ್ದರು. ಪ್ರಕರಣದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಜೆ ವೇಳೆಗೆ ಬಂಧಿಸಲಾಗಿದೆ.

ಮಾಹಿತಿಯ ಪ್ರಕಾರ, ಗುರುವಾರ ಹರೀಶ್ ರಾವತ್ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಧಮ್ ಸಿಂಗ್ ನಗರದ ಕಾಶಿಪುರಕ್ಕೆ ಬಂದಿದ್ದರು. ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ರಾವತ್ ವೇದಿಕೆಯಿಂದ ಕೆಳಗಿಳಿಯಲಾರಂಭಿಸಿದರು. ಅಷ್ಟರಲ್ಲಿ ಯುವಕನೊಬ್ಬ ಏಕಾಏಕಿ ಸ್ಟೇಜ್ ಮೇಲೆ ಏರಿ ಚಾಕು ಬೀಸುತ್ತಾ ಮೈಕ್ ತೆಗೆದುಕೊಂಡು ಮೈದಾನದಲ್ಲಿದ್ದವರಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಕೂಗಾಡಿದ್ದಾನೆ. ಘೋಷಣೆ ಕೂಗದಿದ್ದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ಸಭೆಯಲ್ಲಿ ಆತಂಕಕ್ಕೆ ಕಾರಣವಾಯಿತು. ವೇದಿಕೆಯಲ್ಲಿದ್ದ ಜನರು ಹೇಗೋ ಯುವಕನನ್ನು ಹಿಡಿದು ಆತನ ಕೈಯಿಂದ ಚಾಕು ಕಿತ್ತುಕೊಂಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗದೆ. ಅಷ್ಟರಲ್ಲೇ ಆತಕ ಕೈ ಬಿಡಿಸಿಕೊಂಡು ಪರಾರಿಯಾಗಿದ್ದಾನೆ.

ವಾತಾವರಣ ಹಾಳು ಮಾಡಲಾಗುತ್ತಿದೆ

ಈ ಘಟನೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮನೋಜ್ ಜೋಶಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಯುವಕರು ಚಾಕು ಹಿಡಿದು ವೇದಿಕೆಗೆ ಬಂದಿದ್ದು, ಅಲ್ಲಿದ್ದ ಮಾಜಿ ಸಿಎಂ ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರಿಗೆ ಈ ವಿಚಾರ ಗೊತ್ತೇ ಇರಲಿಲ್ಲ ಎಂದರು. ಚುನಾವಣೆಗೂ ಮುನ್ನ ವಾತಾವರಣ ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆರೋಪಿ ಯುವಕ ಈಗಾಗಲೇ ಕಾರ್ಯಕ್ರಮದಲ್ಲಿ ಹಾಜರಿದ್ದರು ಎಂದು ಪಕ್ಷದ ಕೆಲವು ಕಾರ್ಯಕರ್ತರು ತಿಳಿಸಿದ್ದಾರೆ. ಮಾಜಿ ಸಿಎಂ ಹರೀಶ್ ರಾವತ್ ಆಗಮಿಸಿದ ನಂತರ ಮಾಲಾರ್ಪಣೆ ಮಾಡಿದರು. ಯುವ ಕಾಂಗ್ರೆಸ್ ನ ಕಾಶಿಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭಾತ್ ಸಾಹ್ನಿ ಅವರ ದೂರಿನ ಮೇರೆಗೆ ಪ್ರತಾಪುರ ಗ್ರಾಮದ ವಿನೋದ್ ಕುಮಾರ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕಾಶಿಪುರ ಕೊತ್ವಾಲ್ ಮನೋಜ್ ರಾತೂರಿ ತಿಳಿಸಿದ್ದಾರೆ. ಆರೋಪಿ ಯುವಕ ಮಾನಸಿಕವಾಗಿ ಅಸ್ವಸ್ಥ ಎಂದು ರಾತೂರಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಘೋಷಣೆ ಕೂಗಿದರು 

ಹರೀಶ್ ರಾವತ್ ಅವರ ಸಭೆ ನಡೆಯುವ ಸ್ಥಳದ ಕೆಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಕಾಶಿಪುರ ಎಎಸ್ಪಿ ಚಂದ್ರಮೋಹನ್ ಸಿಂಗ್ ತಿಳಿಸಿದ್ದಾರೆ. ಘಟನೆಯ ಸ್ವಲ್ಪ ಸಮಯದ ಮೊದಲು, ಆರೋಪಿ ಯುವಕ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಧ್ವಜವನ್ನು ಹಿಡಿದುಕೊಂಡು ಘೋಷಣೆಗಳನ್ನು ಎತ್ತುತ್ತಿರುವುದು ಕಂಡುಬಂದಿದೆ. ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.