ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ ಬಂಡುಕೋರ ಮಾಜಿ ಸಚಿವ ಮತ್ತು ಒಬಿಸಿ ನಾಯಕ ದಾರಾ ಸಿಂಗ್‌ ಚೌಹಾಣ್‌ ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.  

ಲಖನೌ (ಜ. 17): ಉತ್ತರ ಪ್ರದೇಶದಲ್ಲಿ ಚುನಾವಣೆ (UP Election) ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ (BJP) ಬಂಡುಕೋರ ಮಾಜಿ ಸಚಿವ ಮತ್ತು ಒಬಿಸಿ ನಾಯಕ ದಾರಾ ಸಿಂಗ್‌ ಚೌಹಾಣ್‌ (Dara Singh Chauhan) ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶನಿವಾರವಷ್ಟೇ ದಾರಾ ಸಿಂಗ್‌ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಭಾನುವಾರ ಎಸ್‌ಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ಚೌಹಾಣ್‌, ‘2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ ಅದು ‘ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌’ ಎಂಬ ಘೋಷಣೆಯನ್ನು ನೀಡಿತ್ತು. ಆದರೆ ಬೆರಳೆಣಿಕೆಯ ಜನರನ್ನಷ್ಟೇ ವಿಕಾಸ (ಅಭಿವೃದ್ಧಿ) ಮಾಡಿತು. ಉಳಿದವರನ್ನು ಅವರ ಹಣೆಬರಹ ಎಂದು ಕೈಬಿಡಲಾಯಿತು’ ವಾಗ್ದಾಳಿ ನಡೆಸಿದರು. ಇದೇ ವೇಳೆ ಸಮಾಜವಾದಿ ಪಕ್ಷವನ್ನು ತಮ್ಮ ‘ಹಳೆಯ ಮನೆ’ ಎಂದು ಬಣ್ಣಿಸಿದ ಅವರು, ‘ನಾವು ಉತ್ತರ ಪ್ರದೇಶದ ರಾಜಕೀಯವನ್ನು ಬದಲಾಯಿಸುತ್ತೇವೆ. ಅಖಿಲೇಶ್‌ ಯಾದವ್‌ರನ್ನು (Akhilesh Yadav) ನಾವು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ಹೇಳಿದರು.

ಚೌಹಾಣ್‌ ಜೊತೆಗೆ ಬಿಜೆಪಿ ಮಿತ್ರಪಕ್ಷ ಆಪ್ನಾ ದಳ ಶಾಸಕ ವಿಶ್ವನಾಥ್‌ಗಂಜಿ ಸಹ ಅಖಿಲೇಶ್‌ ಯಾದವ್‌ ಅವರ ಪಕ್ಷಕ್ಕೆ ಸೇರಿದ್ದಾರೆ. ಶುಕ್ರವಾರ ಮಾಜಿ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತು ಧರಮ್‌ ಸಿಂಗ್‌ ಸೈನಿ ಮತ್ತು 5 ಬಿಜೆಪಿ ಶಾಸಕರು, ಓರ್ವ ಆಪ್ನಾದಳ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

UP Election 2022: ಬಿಜೆಪಿ ಸಚಿವ ರಾಜೀನಾಮೆ, ಮುಲಾಯಂ ಸಿಂಗ್ ಆಪ್ತ ಬಿಜೆಪಿಗೆ

ಮಾಜಿ ಐಪಿಎಸ್‌ ಅಧಿಕಾರಿ ಬಿಜೆಪಿ ಸೇರ್ಪಡೆ: ಬಿಜೆಪಿಯ ಹಲವು ಮುಖಂಡರು ಸಮಾಜವಾದಿ ಪಕ್ಷಕ್ಕೆ ಜಿಗಿಯುತ್ತಿರುವ ನಡುವೆಯೇ ಭಾನುವಾರ ಮಾಜಿ ಐಪಿಎಸ್‌ ಅಧಿಕಾರಿ ಆಸೀಂ ಅರುಣ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ ಆಸೀಂ ಇದಕ್ಕೂ ಮೊದಲು ಕಾನ್ಪುರ ಪೊಲೀಸ್‌ ಕಮಿಷನರ್‌ ಆಗಿದ್ದರು. ಆಸಿಂ ಕನೌಜ್‌ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಬ್ಬ ಮಾಜಿ ಅಧಿಕಾರಿ ರಾಮ್‌ ಬಹದ್ದೂರ್‌ ಸಹ ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯಿಂದಲೂ ಭರ್ಜರಿ ಬೇಟೆ: ಸಮಾಜವಾದಿ ಪಕ್ಷಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಶಾಸಕರ ಬೇಟೆ ಆಡಲಾರಂಭಿಸಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಆಪ್ತ ಹರಿ ಓಂ ಯಾದವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕರಾಗಿದ್ದಲ್ಲದೆ, ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಸಿರ್ಸಾಗಂಜ್ ಶಾಸಕ ಹರಿ ಓಂ ಯಾದವ್, "ಎಸ್ ಪಿಯಲ್ಲಿ ನನಗೆ ಯಾವುದೇ ಮರ್ಯಾದೆ ಸಿಗಲಿಲ್ಲ. ಈ ಮರ್ಯಾದೆ ಬಿಜೆಪಿಯಲ್ಲಿ ಸಿಗುವ ಕಾರಣ ಇಲ್ಲಿ ಬಂದಿದ್ದೇನೆ' ಎಂದು ತಿಳಿಸಿದ್ದಾರೆ. ಅದರೊಂದಿಗೆ ಶಹ್ರಾನ್ ಪುರದ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಸಮಾಜವಾದಿ ಪಕ್ಷದ ಮಾಜಿ ಶಾಸಕ ಧರ್ಮಪಾಲ್ ಸಿಂಗ್ ಕೂಡ ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಪಕ್ಷ ಸೇಪಡೆಯಾದರು.

UP Elections 2022: ಅಲಿಯೂ ಇಲ್ಲ, ಬಾಹುಬಲಿಯೂ ಇಲ್ಲ ಎಂದ ಬಿಜೆಪಿ ಶಾಸಕನಿಗೆ ನೋಟಿಸ್!

ಮತ್ತೊಬ್ಬ ಸಚಿವರ ಮೇಲೆ ಅನುಮಾನ: ಈ ನಡುವೆ ಮತ್ತೊಬ್ಬ ಸಚಿವ ಧರಮ್ ಸಿಂಗ್ ಸೈನಿ ಮೇಲೆಯೂ ಅನುಮಾನ ವ್ಯಕ್ತವಾಗಿದ್ದು, ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಧರಮ್ ಸಿಂಗ್ ಸೈನಿ, ತಾವು ಸಂಪುಟವನ್ನಾಗಲಿ, ಬಿಜೆಪಿಯನ್ನಾಗಲಿ ತೊರೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.