ಸ್ವಾಮಿ ಪ್ರಸಾದ್ ಮೌರ್ಯ ಬಳಿಕ ಯೋಗಿ ಆದಿತ್ಯನಾಥ್ ಸಂಪುಟದ ಮತ್ತೊಬ್ಬ ಸಚಿವ ರಾಜೀನಾಮೆದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡುತ್ತಿಲ್ಲಈ ನಡವೆ ಮುಲಾಯಂ ಸಿಂಗ್ ಯಾದವ್ ಅವರ ಆಪ್ತನನ್ನು ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ
ಲಖನೌ (ಜ. 12): ಉತ್ತರ ಪ್ರದೇಶ (Uttar Pradesh) ಚುನಾವಣೆಗೂ ಮುನ್ನವೇ ಸಾಲು ಸಾಲು ರಾಜೀನಾಮೆ ಆಘಾತಗಳನ್ನು ಭಾರತೀಯ ಜನತಾ ಪಕ್ಷ (BJP) ಎದುರಿಸುತ್ತಿದೆ. ಮಂಗಳವಾರ ಒಂದೇ ದಿನ ಸಂಪುಟ ದರ್ಜೆಯ ಸಚಿವ ಸೇರಿದಂತೆ ನಾಲ್ವರು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ (Samajawadi Party) ಸೇರ್ಪಡೆಯಾಗಿದ್ದರೆ, ಬುಧವಾರ ಪರಿಸರ ಸಚಿವ ದಾರಾ ಸಿಂಗ್ ಚೌಹಾಣ್ (Environment Minister Dara Singh Chauhan) ತಮ್ಮ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಬಿಜೆಪಿ ಕೂಡ ಎದುರಾಳಿ ಸಮಾಜವಾದಿ ಪಕ್ಷದ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಲಾಯಂ ಸಿಂಗ್ ಯಾದವ್ ಅವರ ಆಪ್ತ ಹರಿ ಓಂ ಯಾದವ್ (Hari Om Yadav) ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದಾರಾ ಸಿಂಗ್ ಚೌಹಾಣ್, ಮುಂದೆ ಯಾವ ಪಕ್ಷವನ್ನು ಸೇರುತ್ತೇವೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ತಮ್ಮ ಸಮುದಾಯದ ನಾಯಕರನ್ನು ಭೇಟಿ ಮಾಡಿದ ಬಳಿಕವೇ ಮುಂದೆ ಯಾವ ಪಕ್ಷಕ್ಕೆ ಸೇರಬೇಕು ಎನ್ನುವುದರ ಬಗ್ಗೆ ತೀರ್ಮಾನಿಸುವುದಾಗಿ ದಾರಾ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ (AnandiBen Patel)ಅವರಿಗೆ ನೀಡುವ ವೇಳೆ ಮಾತನಾಡಿದ ದಾರಾ ಸಿಂಗ್ ಚೌಹಾಣ್, ಆಡಳಿತಾರೂಢ ಬಿಜೆಪಿ ಸರ್ಕಾರ ದಲಿತರು, ಇತರೇ ಹಿಂದುಳಿದ ವರ್ಗ, ರೈತರು ಹಾಗೂ ನಿರುದ್ಯೋಗಿ ಯುವಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ. ಮಂಗಳವಾರ ಯುಪಿ ಸರ್ಕಾರದ ಇನ್ನೊಬ್ಬ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದರು. ಮೌರ್ಯ ರಾಜೀನಾಮೆಯ ನಂತರ, ತಿಂದವಾರಿ ಶಾಸಕ ಬ್ರಜೇಶ್ ಪ್ರಜಾಪತಿ, ತಿಲ್ಹರ್‌ನ ರೋಷನ್ ಲಾಲ್ ವರ್ಮಾ ಮತ್ತು ಬಿಲ್ಹೌರ್‌ನ ಭಗವತಿ ಸಾಗರ್ ಕೂಡ ಬಿಜೆಪಿಯನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದರು.
ಮೌರ್ಯ ಮತ್ತು ಚೌಹಾಣ್ ಅವರಲ್ಲದೆ, ಶಾಸಕ ಅವತಾರ್ ಸಿಂಗ್ ಭಾದಾನ ಅವರು ಪಕ್ಷ ತೊರೆದು ಬುಧವಾರ ದೆಹಲಿಯಲ್ಲಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷವನ್ನು ಸೇರಿದ್ದಾರೆ. ಆ ಮೂಲಕ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. 2017ರ ಯುಪಿ ಚುನಾವಣೆಗೆ ಮುಂಚಿತವಾಗಿ ಭದನಾ ಬಿಜೆಪಿಯನ್ನು ಸೇರಿದ್ದರು. ಗುರ್ಜರ್ ಸಮುದಾಯದ ಪ್ರಬಲ ನಾಯಕನಾಗಿ ಇವರನ್ನು ಪರಿಗಣನೆ ಮಾಡಲಾಗಿದೆ. 1999ರಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಮೀರಠ್-ಮಾವನಾ ಲೋಕಸಭಾ ಸ್ಥಾನವನ್ನೂ ಜಯಿಸಿದ್ದರು.
ಬಿಜೆಪಿಯಿಂದಲೂ ಭರ್ಜರಿ ಬೇಟೆ: ಸಮಾಜವಾದಿ ಪಕ್ಷಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಶಾಸಕರ ಬೇಟೆ ಆಡಲಾರಂಭಿಸಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಆಪ್ತ ಹರಿ ಓಂ ಯಾದವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕರಾಗಿದ್ದಲ್ಲದೆ, ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಸಿರ್ಸಾಗಂಜ್ ಶಾಸಕ ಹರಿ ಓಂ ಯಾದವ್, "ಎಸ್ ಪಿಯಲ್ಲಿ ನನಗೆ ಯಾವುದೇ ಮರ್ಯಾದೆ ಸಿಗಲಿಲ್ಲ. ಈ ಮರ್ಯಾದೆ ಬಿಜೆಪಿಯಲ್ಲಿ ಸಿಗುವ ಕಾರಣ ಇಲ್ಲಿ ಬಂದಿದ್ದೇನೆ' ಎಂದು ತಿಳಿಸಿದ್ದಾರೆ. ಅದರೊಂದಿಗೆ ಶಹ್ರಾನ್ ಪುರದ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಸಮಾಜವಾದಿ ಪಕ್ಷದ ಮಾಜಿ ಶಾಸಕ ಧರ್ಮಪಾಲ್ ಸಿಂಗ್ ಕೂಡ ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಪಕ್ಷ ಸೇಪಡೆಯಾದರು.
Uttar Pradesh elections : ಬಿಜೆಪಿಗೆ ಆಘಾತ, ಒಂದೇ ದಿನ ನಾಲ್ವರು ಶಾಸಕರ ರಾಜೀನಾಮೆ!
ಮತ್ತೊಬ್ಬ ಸಚಿವರ ಮೇಲೆ ಅನುಮಾನ: ಈ ನಡುವೆ ಮತ್ತೊಬ್ಬ ಸಚಿವ ಧರಮ್ ಸಿಂಗ್ ಸೈನಿ ಮೇಲೆಯೂ ಅನುಮಾನ ವ್ಯಕ್ತವಾಗಿದ್ದು, ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಧರಮ್ ಸಿಂಗ್ ಸೈನಿ, ತಾವು ಸಂಪುಟವನ್ನಾಗಲಿ, ಬಿಜೆಪಿಯನ್ನಾಗಲಿ ತೊರೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
