ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರ, ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಪ್ರಶಸ್ತಿ!
ಸಮಾಜವಾದಿ ನಾಯಕ, ಬಿಹಾರ ಮಾಜಿಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ನವದೆಹಲಿ(ಜ.23) ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಘೋಷಣೆಯಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಸಿದ್ಧಾಂತದಲ್ಲಿ ರಾಜಕಾರಣ ಮಾಡಿದ ಅತ್ಯುನ್ನತ ನಾಯಕ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಹಿಂದುಳಿದ ವರ್ಗದ ನಾಯಕನಾಗಿ ಗುರುತಿಸಿಕೊಂಡಿದ್ದ ಕರ್ಪೂರಿ ಠಾಕೂರ್, ಜನ ನಾಯಕ ಎಂದೇ ಗುರುತಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಇದೀಗ ಕರ್ಪೂರಿ ಠಾಕೂರ್‌ಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ.
ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ನ್ಯಾಯ, ಬಡವರಿಗೆ ದಾರಿದೀಪವಾಗಿ ಪ್ರಜ್ವಲಿಸಿದ ಜನನಾಯಕ, ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಸಮಾನತೆ ಹಾಗೂ ಸಬಲೀಕರಣ ಪರವಾಗಿ ಹೋರಾಡಿದ ನಾಯಕ ಕರ್ಪೂರಿ ಠಾಕೂರ್ ಪ್ರತಿಷ್ಠಿತ ಮನ್ನಣೆಗೆ ಭಾಜನರಾಗುತ್ತಿದ್ದಾರೆ. ದೀನದಲಿತರಿಗೆ ಉತ್ತಮ ಸ್ಥಾನಮಾನ ನೀಡಲು ಠಾಕೂರ್ ಅವರ ಕೊಡುಗೆ ಅಪಾರ. ಈ ಪ್ರಶಸ್ತಿಯು ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೆ ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜವನ್ನು ರಚಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವೀರ್ ಸಾವರ್ಕರ್‌ಗೆ ಭಾರತ ರತ್ನ, ಯಾರೂ ಶಿಫಾರಸು ಮಾಡುವ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ
1970ರಿಂದ 1971 ಹಾಗೂ 1977ರಿಂದ 1979ರ ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್, 1988ರಲ್ಲಿ ತಮ್ಮ 64 ವಯಸ್ಸಿನಲ್ಲಿ ನಿಧನರಾದರು. 1924ರಲ್ಲಿ ಹುಟ್ಟಿದ ಕರ್ಪೂರಿ ಠಾಕೂರ್, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿದ ಕರ್ಪೂರಿ ಠಾಕೂರ್ 26 ತಿಂಗಳು ಜೈಲು ವಾಸ ಅನುಭವಿಸಿದ್ದರು.
ಭಾರತದ ಸ್ವಾತಂತ್ರ್ಯ ಸಿಕ್ಕ ಬಳಿಕ ಬಿಹಾರ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ಪೂರಿ ಠಾಕೂರ್, 1952ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು. ಸೋಶಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ತಾಜ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಶಿಕ್ಷಣ ಸಚಿವರಾಗಿದ್ದ ವೇಳೆ ಬಿಹಾರ ಶಾಲೆಗಳಲ್ಲಿ ಇಂಗ್ಲೀಷ್ ಕಡ್ಡಾಯವನ್ನು ತೆಗೆದು ಹಾಕಿ ಆಯ್ಕೆಯಾಗಿ ಮಾಡಿ ಹೊಸ ಕ್ರಾಂತಿ ಮಾಡಿದ್ದರು.
ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್, ವಿವಾದವಿಲ್ಲದ ವೃತ್ತಿ ಬದುಕು!