ಭೋಪಾಲ(ಅ.20): ಮಧ್ಯಪ್ರದೇಶದ ಸಚಿವೆ ಇಮಾರ್ತಿ ದೇವಿ ಅವರನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಕಮಲನಾಥ್‌ ‘ಐಟಂ’ ಎಂದು ಕರೆದಿರುವುದು ಭಾರಿ ವಿವಾದ ಸೃಷ್ಟಿಸಿದೆ. ಇದರ ವಿರುದ್ಧ ಸ್ವತಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ಹಿರಿಯ ಬಿಜೆಪಿ ನಾಯಕರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಪಷ್ಟನೆ ಕೇಳಿ ಕಮಲನಾಥ್‌ಗೆ ನೋಟಿಸ್‌ ಜಾರಿಗೊಳಿಸಿದೆ.

ಈ ಹಿಂದೆ ಕಮಲನಾಥ್‌ ನೇತೃತ್ವದ ಸರ್ಕಾರವನ್ನು ಬೀಳಿಸಲು 21 ಕಾಂಗ್ರೆಸ್‌ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ಅವರಲ್ಲಿ ಇಮಾರ್ತಿ ದೇವಿ ಕೂಡ ಒಬ್ಬರು. ನ.3ರಂದು ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವೆಯಾಗಿರುವ ಇಮಾರ್ತಿ ದೇವಿ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಕಮಲನಾಥ್‌ ತೆರಳಿದ್ದರು. ಆಗ ಪ್ರಚಾರ ಭಾಷಣದಲ್ಲಿ ‘ಇಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಇವರ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿ ‘ಐಟಂ’’ ಎಂದು ಹೇಳಿದ್ದರು. ಮಹಿಳೆಯೊಬ್ಬರ ಬಗ್ಗೆ ಮಾಜಿ ಮುಖ್ಯಮಂತ್ರಿಯಂತಹ ನಾಯಕರೊಬ್ಬರು ಬಳಸಿದ ಈ ಕೀಳು ಪದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಕಮಲಾಥ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚೌಹಾಣ್‌, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಸೋಮವಾರ ಎರಡು ಗಂಟೆ ಮೌನ ಉಪವಾಸ ಸತ್ಯಾಗ್ರಹ ನಡೆಸಿದರು. ಜೊತೆಗೆ ನಾಥ್‌ ಹೇಳಿಕೆ ವಿರುದ್ಧ ಸೋನಿಯಾ ಗಾಂಧಿಗೆ ಚೌಹಾಣ್‌ ಪತ್ರ ಬರೆದಿದ್ದಾರೆ.

ಈ ನಡುವೆ ಹರಿಜನ ಮಹಿಳೆಯನ್ನು ಹೇಗೆ ಗೌರವಿಸಬೇಕು ಎಂಬುದು ಕಮಲ್‌ನಾಥ್‌ಗೆ ಗೊತ್ತಿಲ್ಲ ಎಂದು ಇರ್ಮಾತಿ ದೇವಿ ಕಿಡಿಕಾರಿದ್ದಾರೆ.