ನವದೆಹಲಿ(ಏ.15): ಕೊರೋನಾ 2ನೇ ಅಲೆ ತೀವ್ರಗೊಳ್ಳುತ್ತಿರುವ ಕಾರಣ ಹಾಗೂ ದೇಶದಲ್ಲಿ ಲಸಿಕೆ ಅಭಾವದ ಕೂಗು ಎದ್ದಿರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಈಗಾಗಲೇ ಅನುಮೋದನೆ ಪಡೆದು ಬಳಕೆಯಲ್ಲಿರುವ ಕೋವಿಡ್‌ ನಿರೋಧಕ ವಿದೇಶೀ ಲಸಿಕೆಗಳಿಗೆ ‘ರತ್ನಗಂಬಳಿ’ ಹಾಸಲು ಭಾರತ ನಿರ್ಧರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿದೇಶಗಳಲ್ಲಿ ಅನುಮತಿ ಪಡೆದಿರುವ ಲಸಿಕೆಗಳನ್ನು ಭಾರತದಲ್ಲಿ ತುರ್ತು ಬಳಕೆಗೆ ನೀಡಲು ಬುಧವಾರ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಇದರಿಂದಾಗಿ ಫೈಜರ್‌, ಮಾಡೆರ್ನಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ನಂತಹ ವಿದೇಶೀ ಲಸಿಕೆಗಳು ಭಾರತಕ್ಕೆ ಬರಲು ಅನುಕೂಲವಾಗಲಿದೆ.

‘ಈವರೆಗೆ ಯಾವುದೇ ಲಸಿಕೆ ಇರಲಿ.. ಅವು ಮೂರು ಹಂತದ ಅನುಮೋದನೆ ಪಡೆಯಲೇಬೇಕು ಎಂಬುದು ಸರ್ಕಾರದ ನಿಯಮವಾಗಿತ್ತು. ಆದರೆ ಈ ನಿಯಮ ಸಡಿಲಿಸಲಾಗಿದೆ. ಲಸಿಕೆಯನ್ನು 100 ಫಲಾನುಭವಿಗಳ ಮೇಲೆ 7 ದಿನ ಪ್ರಯೋಗಿಸಬೇಕು. ಈ 7 ದಿನಗಳ ಸುರಕ್ಷತಾ ಫಲಿತಾಂಶ ಆಧರಿಸಿ ದೇಶದಲ್ಲಿ ತುರ್ತು ಬಳಕೆಗೆ ಅನುಮೋದಿಸಲಾಗುತ್ತದೆ. ಇದಾದ ನಂತರೂ ಇದಕ್ಕೆ ಸಮಾನಾಂತರವಾಗಿ ಕ್ಲಿನಿಕಲ್‌ ಪ್ರಯೋಗಗಳು ಮುಂದುವರಿಯಬಹುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.