ನವದೆಹಲಿ(ಫೆ.13): ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳಲು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಇಷ್ಟವಿರಲಿಲ್ಲ ಎಂಬ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಟ್ವೀಟ್’ನ್ನು ಇತಿಹಾಸಕಾರ ರಾಮಚಂದ್ರ ಗುಹಾ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದ ಎಸ್ ಜೈಶಂಕರ್, ‘ಪಟೇಲ್ ಸಂಪುಟಕ್ಕೆ ಸೇರುವುದು ನೆಹರೂ ವರಿಗೆ ಇಷ್ಟವಿರಲಿಲ್ಲ ಎಂಬುದನ್ನು ನಾನು ವಿಪಿ ಮೆನನ್ ಅವರ ಆತ್ಮ ಚರಿತ್ರೆಯನ್ನು ಓದಿ ತಿಳಿದುಕೊಂಡೆ..’ ಎಂದು ಹೇಳಿದ್ದರು. 

ಜೈಶಂಕರ್ ಅವರ ಟ್ವೀಟ್’ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಮಚಂದ್ರ ಗುಹಾ, ಇದೊಂದು ಸುಳ್ಳಿನ ಕಂತೆ ಎಂದು ಜರೆದಿದ್ದಾರೆ. ಆಧುನಿಕ ಭಾರತದ ಅಡಿಪಾಯ ಹಾಕಿದ ನಾಯಕನ ಕುರಿತು ಕೀಳಾಗಿ ಮಾತನಾಡುವುದು ವಿದೇಶಾಂಗ ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಮೋದಿ ಹೊಗಳಿದ ರಾಮಚಂದ್ರ ಗುಹಾ!

ಇಂತಹ ಸುಳ್ಳು ಹೇಳಿಕೆಗಳನ್ನು ನೀಡುವುದು ಬಿಜೆಪಿ ಐಟಿ ಸೆಲ್ ಕೆಲಸವೇ ಹೊರತು ವಿದೇಶಾಂಗ ಸಚಿವರ ಕೆಲಸವಲ್ಲ ಎಂದು ರಾಮಚಂದ್ರ ಗುಹಾ ಟ್ವೀಟ್ ಮಾಡಿದ್ದಾರೆ.

ವಿಪಿ ಮೆನನ್ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಅಂಶ ಸತ್ಯವಲ್ಲ ಎಂಬುದನ್ನು ಪ್ರೋ. ಶ್ರೀನಾಥ್ ರಾಘವನ್ ಈಗಾಗಲೇ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಳು ಇತಿಹಾಸವನ್ನು ಪ್ರಚುರಪಡಿಸುವ ಬದಲು ಜೈಶಂಕರ್ ವಿದೇಶಾಂಗ ನೀತಿಯತ್ತ ಹೆಚ್ಚಿನ ಗಮನಹರಿಸಲಿ ಎಂದು ಗುಹಾ ಕಿಡಿಕಾರಿದ್ದಾರೆ.