ರಾಂಚಿ(ಏ.17):  ಮೇವು ಹಗರಣದಲ್ಲಿ ಜೈಲು ಸೇರಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ಸಿಕ್ಕಿದೆ. ಆದರೆ ಅನಾರೋಗ್ಯ ಕಾರಣ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಯಾದವ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ.

ಲಾಲು ಸ್ಥಿತಿ ವಿಷಮ: ದಿಲ್ಲಿ ಏಮ್ಸ್‌ಗೆ ಸ್ಥಳಾಂತರ!

ಮೇವು ಹಗರಣ ಆರೋಪದಡಿ ಲಾಲೂ ಪ್ರಸಾದ್ ಯಾದವ್ ಖಜಾನೆಯಿಂದ 3.13 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿತ್ತು. ಮೇವು ಹರಗಣದಲ್ಲಿ ಲಾಲೂ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ವಿಶೇಷ ಸಿಬಿಐ ಕೋರ್ಟ್ 2018ರಲ್ಲಿ 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಅನಾರೋಗ್ಯ ಕಾರಣ ಈಗಾಗಲೇ ಲಾಲೂ ಪ್ರಸಾದ್ ಯಾದವ್ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಲೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯರ ಜೊತೆ ಮಾತುಕತೆ ನಡೆಸಿದ್ದೇವೆ. ಲಾಲೂಜಿ ಸಂಪೂರ್ಣ ಗುಣಮುಖರಾಗುವ ಭರವಸೆ ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಲಾಲೂ ಪುತ್ರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. 

ಜಾಮೀನು ಸುದ್ದಿ ಕೇಳಿದ ಬಿಹಾರ ಜನತೆ ಸಂತಸಗೊಂಡಿದ್ದಾರೆ. ಲಾಲೂ ಅವರನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಕೊರೋನಾ ಕಾರಣ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.