ಲಾಲು ಸ್ಥಿತಿ ವಿಷಮ: ದಿಲ್ಲಿ ಏಮ್ಸ್‌ಗೆ ಸ್ಥಳಾಂತರ| 2 ದಿನದಿಂದ ಉಸಿರಾಟ ಸಮಸ್ಯೆ, ನ್ಯುಮೋನಿಯಾ

 ರಾಂಚಿ(ಜ.24): ಆರ್‌ಜೆಡಿ ಸಂಸ್ಥಾಪಕ ಲಾಲುಪ್ರಸಾದ್‌ ಯಾದವ್‌ ಅವರ ಸ್ಥಿತಿ ಶನಿವಾರ ಮತ್ತಷ್ಟುವಿಷಮಿಸಿದೆ. ಹೀಗಾಗಿ ಅವರನ್ನು ರಾಂಚಿ ಆಸ್ಪತ್ರೆಯಿಂದ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ 72ರ ಹರೆಯದ ಲಾಲು, ಈವರೆಗೂ ಅನಾರೋಗ್ಯದ ಕಾರಣ ರಾಂಚಿಯ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ 2 ದಿನಗಳಿಂದ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಶುಕ್ರವಾರ ಅವರಲ್ಲಿ ನ್ಯುಮೋನಿಯಾ ದೃಢಪಟ್ಟಿತ್ತು.

‘ತೀವ್ರ ಅನಾರೋಗ್ಯ ಹಾಗೂ ವಯಸ್ಸಿನ ಹಿನ್ನೆಲೆಯಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ಲಾಲು ಅವರನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು’ ಎಂದು ರಿಮ್ಸ್‌ ನಿರ್ದೇಶಕ ಡಾ| ಮಲೇಶ್ವರ ಪ್ರಸಾದ್‌ ತಿಳಿಸಿದ್ದಾರೆ.

ಏರ್‌ ಆ್ಯಂಬುಲೆನ್ಸ್‌ ಬಳಸಿ ದಿಲ್ಲಿಗೆ ಲಾಲು ಅವರನ್ನು ಸಂಜೆ ಕರೆದೊಯ್ಯಲಾಯಿತು. ಅವರನ್ನು ದಿಲ್ಲಿಗೆ ಕರೆದೊಯ್ಯಲು ಸಿಬಿಐ ಕೋರ್ಟ್‌ ಅನುಮತಿಯನ್ನೂ ಪಡೆಯಲಾಯಿತು.

ಶುಕ್ರವಾರ ರಾತ್ರಿಯಷ್ಟೇ ಲಾಲು ಪತ್ನಿ ರಾಬ್ಡಿ ದೇವಿ, ಪುತ್ರಿ ಮಿಸಾ ಭಾರತಿ, ಪುತ್ರರಾದ ತೇಜಸ್ವಿ ಹಾಗೂ ತೇಜ್‌ಪ್ರತಾಪ್‌ ಯಾದವ್‌ ಅವರು ರಾಂಚಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ ಲಾಲು ಆರೋಗ್ಯ ವಿಚಾರಿಸಿದ್ದರು. ಬಳಿಕ ‘ಲಾಲು ದೇಹಸ್ಥಿತಿ ವಿಷಮಿಸಿದೆ’ ಎಂದು ತೇಜಸ್ವಿ ಹೇಳಿದ್ದರು.