ಉತ್ತರ ಪ್ರದೇ​ಶ ಹಾಗೂ ಉತ್ತ​ರಾ​ಖಂಡ​ದಲ್ಲಿ ಬುಧ​ವಾರ ಭಾರಿ ಮಳೆ ಆಗಿದೆ. ಕೇದಾ​ರ​ನಾ​ಥ​ದಲ್ಲಿ ತಡ​ರಾತ್ರಿ ಮೇಘ​ಸ್ಫೋಟ ಉಂಟಾ​ಗಿದೆ. ಮಳೆಗೆ ಉತ್ತ​ರಾ​ಖಂಡ​ದಲ್ಲಿ ಮೂವರು ಬಲಿ​ಯಾ​ಗಿ​ದ್ದಾರೆ

ಲಖನೌ/ಡೆಹ್ರಾ​ಡೂ​ನ್‌: ಉತ್ತರ ಪ್ರದೇ​ಶ ಹಾಗೂ ಉತ್ತ​ರಾ​ಖಂಡ​ದಲ್ಲಿ ಬುಧ​ವಾರ ಭಾರಿ ಮಳೆ ಆಗಿದೆ. ಕೇದಾ​ರ​ನಾ​ಥ​ದಲ್ಲಿ ತಡ​ರಾತ್ರಿ ಮೇಘ​ಸ್ಫೋಟ ಉಂಟಾ​ಗಿದೆ. ಮಳೆಗೆ ಉತ್ತ​ರಾ​ಖಂಡ​ದಲ್ಲಿ ಮೂವರು ಬಲಿ​ಯಾ​ಗಿ​ದ್ದಾರೆ. ಇನ್ನು ಭಾರಿ ಮಳೆ ಪರಿಣಾಮ ನೀರು ಉತ್ತರಪ್ರದೇಶ ವಿಧಾನಸಭೆಯ ಆವರಣಕ್ಕೆ ನುಗ್ಗಿದೆ. ಹೀಗಾಗಿ ಸರ್ಕಾರಿ ಕಚೇರಿ, ಕಾರ್ಯಾಲಯಗಳು, ನೌಕರರು, ಸಿಬ್ಬಂದಿ ಇದ್ದ ಕೊಠಡಿಗಳೂ ಜಲಾವೃತವಾಗಿವೆ. ನೌಕರರು ಬಕೆಟ್‌ನಿಂದ ನೀರನ್ನು ಹೊರಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಛಾವಣಿಗಳಿಂದ ನೀರು ಸೋರುತ್ತಿತ್ತು. ಈ ವೇಳೆ ವಿಧಾನಸಭೆಯಲ್ಲಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮುಂಬಾಗಿಲಿನಿಂದ ತೆರಳಲು ಸಾಧ್ಯವಾಗದೆ ಮತ್ತೊಂದು ದ್ವಾರದಿಂದ ಹೊರ ಹೋಗಿದ್ದಾರೆ.

ಪ್ರವಾಹ ಪೀಡಿತ ವಯನಾಡಿಗೆ ಇಂದು ರಾಹುಲ್‌, ಪ್ರಿಯಾಂಕಾ, ಪಿಣರಾಯಿ ಭೇಟಿ

ನವದೆಹಲಿ: ಭೂಕುಸಿತ ದುರಂತ ಸಂಭವಿಸಿರುವ ಕೇರಳದ ವಯನಾಡಿಗೆ, ಕ್ಷೇತ್ರದ ಹಿಂದಿನ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರ ಭೇಟಿ ನೀಡಲಿದ್ದಾರೆ. ಪ್ರತಿ​ಕೂಲ ಹವಾ​ಮಾನ ಕಾರಣ ಹೆಲಿ​ಕಾ​ಪ್ಟರ್‌ ಲ್ಯಾಂಡಿಂಗ್‌ ಅಸಾಧ್ಯ ಎಂದು ಕೇರ​ಳದ ಅಧಿ​ಕಾ​ರಿ​ಗಳು ತಿಳಿ​ಸಿ​ರುವ ಕಾರಣ ಬುಧವಾರ ತಮ್ಮ ಭೇಟಿಯನ್ನು ಮುಂದೂಡಿದ್ದರು.

ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಜೀವ ಮತ್ತು ಆಸ್ತಿ ನಷ್ಟದ ಕುರಿತು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಎಲ್ಲಾ ರೀತಿಯಲ್ಲೂ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಅಲ್ಲಿನ ಪರಿಸರ ಸಮಸ್ಯೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.

200 ಸಹ​ಕಾರ ಬ್ಯಾಂಕ್‌​ಗಳ ಮೇಲೆ ಸೈಬರ್‌ ದಾಳಿ

ನವದೆಹಲಿ: ದೇಶದ 200 ಸಹ​ಕಾರ ಹಾಗೂ ಗ್ರಾಮೀಣ ಬ್ಯಾಂಕ್‌​ಗಳ ಕಂಪ್ಯೂಟರ್‌ ವ್ಯವಸ್ಥೆ ನಿರ್ವ​ಹಿ​ಸುವ ಇ- ಎಡ್ಜ್‌ ಟೆಕ್ನಾ​ಲ​ಜೀಸ್‌ ಮೇಲೆ ಹ್ಯಾಕ​ರ್‌​ಗಳು ಸೈಬರ್‌ ದಾಳಿ ನಡೆಸಿದ್ದಾರೆ. ಇದ​ರಿಂದ ಸೇವೆ​ ಬಾಧಿ​ತ​ವಾ​ಗಿ​ವೆ ಎಂದು ನ್ಯಾಷ​ನಲ್‌ ಪೇಮೆಂಟ್ಸ್‌ ಸಂಸ್ಥೆ ‘ಎನ್‌​ಪಿ​ಸಿಐ’ ಹೇಳಿ​ದೆ. ಇದರ ಬೆನ್ನಲ್ಲೇ ಇ-ಎಡ್ಜ್‌ ಅನ್ನು ತಾತ್ಕಾ​ಲಿ​ಕ​ವಾಗಿ ಪೇಮೆಂಟ್‌ ಸಿಸ್ಟಂ ಸಂಪ​ರ್ಕ​ದಿಂದ ಎನ್‌​ಪಿ​ಸಿಐ ಹೊರ​ಗಿ​ರಿಸಿ ಜನರ ಹಣ ಸುರ​ಕ್ಷಿತವಾಗಿ​ರು​ವಂತೆ ನೋಡಿ​ಕೊಂಡಿ​ದೆ.

ದೇಶೀಯ ತಂತ್ರಜ್ಞಾನ ಬಳಿಸಿ ಭಾರತದಲ್ಲಿ ಬುಲೆಟ್‌ ರೈಲು ಅಭಿವೃದ್ಧಿ: ಅಶ್ವಿನಿ ವೈಷ್ಣವ್‌

ನವದೆಹಲಿ: ದೇಶೀಯ ತಂತ್ರಜ್ಞಾನವನ್ನು ಬಳಸಿ ದೇಶದಲ್ಲಿ ಬುಲೆಟ್ ರೈಲುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯನಿರತವಾಗಿದೆ ಎಂದು ಬುಧವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದರು. ಅಹಮದಾಬಾದ್ ಮತ್ತು ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಮೊದಲ ಬುಲೆಟ್ ರೈಲು ಯೋಜನೆಯು ತಾಂತ್ರಿಕವಾಗಿ ಬಹಳ ಸಂಕೀರ್ಣವಾಗಿದೆ. ಜಪಾನ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು. ಆರಂಭದಲ್ಲಿ ಬುಲೆಟ್ ರೈಲು ತಂತ್ರಜ್ಞಾನವನ್ನು ವಿದೇಶಗಳಿಂದ ಪಡೆದುಕೊಳ್ಳುತ್ತಿದ್ದೆವು. ಆದರೆ ಈಗ ಭಾರತದಲ್ಲಿಯೇ ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ನಾವು ಬುಲೆಟ್‌ ರೈಲುಗಳನ್ನು ನಮ್ಮ ದೇಶೀಯ ತಂತ್ರಜ್ಞಾನದಿಂದಲೇ ಸಿದ್ಧಪಡಿಸುತ್ತಿದ್ದೇವೆ. ನಾವು ಸ್ವಾವಲಂಬಿಗಳಾಗಲಿದ್ದೇವೆ ಎಂದು ತಿಳಿಸಿದರು.

ಇನ್ಫೋಸಿಸ್‌ಗೆ 32000 ಕೋಟಿ ರು. ತೆರಿಗೆ ನೋಟಿಸ್‌?: ಈ ಮೊತ್ತ ಸಂಸ್ಥೆಯ ಒಂದಿಡೀ ವರ್ಷದ ಲಾಭಕ್ಕೆ ಸಮ