ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಿಜ| ತಮಿಳುನಾಡಲ್ಲಿ ಡಿಎಂಕೆ, ಕೇರಳದಲ್ಲಿ ಎಡರಂಗ| ಪುದುಚೇರಿ, ಅಸ್ಸಾಂನಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿದ್ದವು| ಬಂಗಾಳದಲ್ಲಿ 6 ಸಂಸ್ಥೆಗಳು ಟಿಎಂಸಿ, 3 ಸಂಸ್ಥೆಗಳು ಬಿಜೆಪಿ ಗೆಲುವಿನ ಭವಿಷ್ಯ ಹೇಳಿದ್ದವು

ನವದೆಹಲಿ(ಮೇ.03): ಪಂಚರಾಜ್ಯ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆ ಬಹುತೇಕ ನಿಜವಾಗಿದೆ.

ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಡರಂಗ, ಪುದುಚೇರಿಯಲ್ಲಿ ಎನ್‌ಆರ್‌ ಕಾಂಗ್ರೆಸ್‌-ಬಿಜೆಪಿ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇದು ಮತ ಎಣಿಕೆ ಬಳಿಕ ಈಗ ನಿಜವಾಗಿದೆ.

ಆದರೆ ಪಶ್ಚಿಮ ಬಂಗಾಳದಲ್ಲಿ ಸಮೀಕ್ಷೆ ನಡೆಸಿದ್ದ 9 ಮಾಧ್ಯಮ ಸಂಸ್ಥೆಗಳ ಪೈಕಿ 6 ಚಾನೆಲ್‌ಗಳು ತೃಣಮೂಲ ಕಾಂಗ್ರೆಸ್‌ ಗೆಲ್ಲಲಿದೆ ಎಂದಿದ್ದರೆ, 2 ವಾಹಿನಿಗಳು ಬಿಜೆಪಿ ಗೆಲುವಿನ ಮುನ್ಸೂಚನೆ ನೀಡಿದ್ದವು. ಇನ್ನು ಒಂದು ಚಾನೆಲ್‌ ಬಿಜೆಪಿ ಮುನ್ನಡೆ ಎಂದು ಹೇಳಿದ್ದರೂ ಅತಂತ್ರ ವಿಧಾನಸಭೆಯ ಸುಳಿವು ನೀಡಿತ್ತು. ಆದರೆ ಈ 3 ಚಾನೆಲ್‌ಗಳ ಭವಿಷ್ಯ ಸುಳ್ಳಾಗಿದ್ದು ದೀದಿ ಗೆಲ್ಲಲಿದ್ದಾರೆ ಎಂದಿದ್ದ 6 ವಾಹಿನಿಗಳ ಭವಿಷ್ಯ ನಿಜವಾಗಿದೆ. ಅಂದರೆ ಬಹುತೇಕ ಮಾಧ್ಯಮ ಸಂಸ್ಥೆಗಳು ಮಮತಾ ಬ್ಯಾನರ್ಜಿ ಗೆಲುವಿನ ಮುನ್ಸೂಚನೆ ನೀಡಿ ನಿಖರ ಫಲಿತಾಂಶ ನೀಡಿವೆ. ಅದರಲ್ಲಂತೂ ‘ಟುಡೇಸ್‌ ಚಾಣಕ್ಯ’ 180ರಿಂದ 188 ಸ್ಥಾನಗಳನ್ನು ಟಿಎಂಸಿ ಗೆಲ್ಲಬಹುದು ಎಂದಿತ್ತು. ಇದು ವಾಸ್ತವಕ್ಕೆ ಹತ್ತಿರವಾದ ನಿಖರ ಸಮೀಕ್ಷೆ ಎಂದು ಸಾಬೀತಾಗಿದೆ.

ಎಕ್ಸಿಟ್‌ ಪೋಲ್‌ನ ಪೋಲ್‌ ಆಫ್‌ ಪೋಲ್ಸ್‌ ಸಮೀಕ್ಷೆ ಹೀಗಿತ್ತು

ಪ.ಬಂಗಾಳ (ಕ್ಷೇತ್ರ 294/ಬಹುಮತಕ್ಕೆ 148)

ಟಿಎಂಸಿ 150

ಬಿಜೆಪಿ 128

ಎಡರಂಗ+ಕಾಂಗ್ರೆಸ್‌ 14

ಇತರರು 00

ತಮಿಳುನಾಡು (ಕ್ಷೇತ್ರ 234/ಬಹುಮತಕ್ಕೆ 118)

ಡಿಎಂಕೆ+ಕಾಂಗ್ರೆಸ್‌ 150

ಅಣ್ಣಾಡಿಎಂಕೆ+ಬಿಜೆಪಿ 60

ಇತರರು 24

ಕೇರಳ (ಕ್ಷೇತ್ರ 140/ಬಹುಮತಕ್ಕೆ 71)

ಎಡರಂಗ 88

ಯುಡಿಎಫ್‌ 51

ಬಿಜೆಪಿ 1

ಅಸ್ಸಾಂ (ಕ್ಷೇತ್ರ 126/ಬಹುಮತಕ್ಕೆ 64)

ಬಿಜೆಪಿ+ 72

ಕಾಂಗ್ರೆಸ್‌+ 53

ಇತರರು 1

ಪುದುಚೇರಿ (ಕ್ಷೇತ್ರ 30/ಬಹುಮತಕ್ಕೆ 16)

ಬಿಜೆಪಿ+ 18

ಕಾಂಗ್ರೆಸ್‌+ 11

ಇತರರು 1

ಚುನಾವಣಾಪೂರ್ವ ಸಮೀಕ್ಷೆ 2 ಕಡೆ 50:50 ನಿಜ

ಬಂಗಾಳದಲ್ಲಿ ಮೊದಮೊದಲು ಮಮತಾ ಭರ್ಜರಿ ಗೆಲುವು ಎಂದಿದ್ದ ಸಮೀಕ್ಷೆಗಳು ಕೊನೆಕೊನೆಗೆ ಬಿಜೆಪಿ-ಟಿಎಂಸಿ ಸಮಬಲ ಸಾಧಿಸಲಿವೆ ಎಂದು ಹೇಳಿದ್ದವು. ಆದರೆ ಇದು ಸುಳ್ಳಾಗಿದೆ. ಮಮತಾ ಭರ್ಜರಿ ಜಯ ಸಾಧಿಸಿದ್ದಾರೆ.

ತಮಿಳುನಾಡಿನಲ್ಲಿ ಸಮೀಕ್ಷೆ ನಡೆಸಿದ್ದ 2 ಸಂಸ್ಥೆಗಳ ಪೈಕಿ 1 ಸಂಸ್ಥೆ ಅಣ್ಣಾಡಿಎಂಕೆ ಹಾಗೂ ಇನ್ನೊಂದು ಡಿಎಂಕೆ ಗೆಲುವು ಎಂದಿತ್ತು. ಈಗ ಫಲಿತಾಂಶ ನೋಡಿದಾಗ ಇದು 50:50 ನಿಜ ಎಂದು ಸಾಬೀತಾಗಿದೆ.

ಆದರೆ ಪುದುಚೇರಿ, ಕೇರಳ ಹಾಗೂ ಅಸ್ಸಾಂನಲ್ಲಿ ಕ್ರಮವಾಗಿ ಎನ್‌ಡಿಎ, ಎಡರಂಗ ಹಾಗೂ ಬಿಜೆಪಿ ಜಯದ ಭವಿಷ್ಯವನ್ನು ಮಾಧ್ಯಮಗಳು ನಿಖರವಾಗಿ ನುಡಿದಿದ್ದವು. ಅದು ನಿಜವಾಗಿದೆ.