ಹಿಮಾಚಲದಲ್ಲಿ ಡಿಕೆಶಿ ಸಂಧಾನಕ್ಕೆ ಮೊದಲ ಜಯ: ಸಚಿವನ ರಾಜೀನಾಮೆ ವಾಪಸ್
ರಾಜ್ಯಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ನಿರ್ವಹಿಸಲು ನಿಯೋಜಿತವಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲ ಯತ್ನದಲ್ಲಿ ಜಯ ಸಾಧಿಸಿದ್ದಾರೆ.
ಶಿಮ್ಲಾ: ರಾಜ್ಯಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ನಿರ್ವಹಿಸಲು ನಿಯೋಜಿತವಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲ ಯತ್ನದಲ್ಲಿ ಜಯ ಸಾಧಿಸಿದ್ದಾರೆ. ಕಳೆದೆರಡು ದಿನಗಳಿಂದ ನಡೆದ ಘಟನೆಗಳಿಂದ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಕ್ರಮಾದಿತ್ಯ ಸಿಂಗ್ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಾಹ್ನ ರಾಜೀನಾಮೆ ಸಲ್ಲಿಸಿದ್ದ ಸಿಂಗ್ ಅವರು ಡಿಕೆಶಿ ಹಾಗೂ ಇನ್ನೊಬ್ಬ ವೀಕ್ಷಕ ಭೂಪಿಂದರ್ ಸಿಂಗ್ ಹೂಡಾ ನಡೆಸಿದ ಸಂಧಾನ ಸಭೆ ಬಳಿಕ ಸಂಜೆ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಬಿಜೆಪಿ ಸಂಪರ್ಕದಲ್ಲಿರುವ 9 ಶಾಸಕರ ಮನವೊಲಿಸುವಲ್ಲಿ ಡಿಶಿಕೆ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತೊಂದಡೆ ವಿಶ್ವಾಸಮತ ಸಾಬೀತು ಮಾಡಲು ಬಿಜೆಪಿ ಕೋರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 6 ಮಂದಿ ಶಾಸಕರು ಹಾಗೂ ಕಾಂಗ್ರೆಸ್ ಬೆಂಬಲಿಗ 3 ಪಕ್ಷೇತರ ಶಾಸಕರು ಅಡ್ಡಮತದಾನ ಮಾಡಿ ಬಿಜೆಪಿಯ ಗೆಲುವಿಗೆ ಕಾರಣವಾಗಿದ್ದರು. ಇದಾದ ಬಳಿಕ ಇವರು ನಾಪತ್ತೆಯಾಗಿ ಬುಧವಾರ ಮತ್ತೆ ಶಿಮ್ಲಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಇವರ ಆಗಮನದ ಸಮಯದಲ್ಲಿ ಬಿಜೆಪಿ ಶಾಸಕರು ನಮ್ಮ ಕೆಲಸ ಸಾಧಿಸಿ ಆಗಿದೆ ಎಂದು ಘೋಷಣೆಯನ್ನು ಕೂಗಿರುವುದು ರಾಜ್ಯ ಸರ್ಕಾರವನ್ನು ಗೊಂದಲಕ್ಕೀಡು ಮಾಡಿದೆ.
ಶಾಸಕರ ಭೇಟಿಯಾದ ಡಿಕೆಶಿ:
ಬಂಡಾಯ ಶಾಸಕರ ಮನವೊಲಿಸುವ ಕೆಲಸವನ್ನು ನಿರ್ವಹಿಸಲು ಈಗಾಗಲೇ ಕಾಂಗ್ರೆಸ್ ಮುಂದಾಗಿದ್ದು, ಡಿಕೆಶಿ ಸೇರಿದಂತೆ ಹಿರಿಯ ನಾಯಕರನ್ನು ಹಿಮಾಚಲಕ್ಕೆ ಕಳುಹಿಸಿದೆ. ಹಲವು ನಾಯಕರು ಹಾಗೂ ಬಂಡುಕೋರ ಶಾಸಕರ ಬಿಟ್ಟು ಮಿಕ್ಕ ಎಲ್ಲ ಶಾಸಕರ ಜತೆ ಡಿಕೆಶಿ ಸಭೆ ನಡೆಸಿದ್ದಾರೆ.
ರಾಜೀನಾಮೆ ನೀಡಲ್ಲ, ಹೋರಾಡುತ್ತೇನೆ:
ರಾಜಕೀಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಸುಖು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಕೊನೆಯವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. ನಾವು ಬಹುಮತವನ್ನು ಸಾಬೀತು ಮಾಡುತ್ತೇವೆ. ಆ ಮೂಲಕ ನಾವು ಗೆಲ್ಲುತ್ತೇವೆ. ನಮ್ಮ ಮೂಲಕ ಹಿಮಾಚಲದ ಜನ ಗೆಲ್ಲುತ್ತಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಬೀಳುವ ಭೀತಿಯ ನಡುವೆ 15 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟಿಸಿದ ಸ್ಪೀಕರ್
ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಯತ್ನ- ಕಾಂಗ್ರೆಸ್:
ಬಿಕ್ಕಟ್ಟಿನ ನಡುವೆಯೇ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಪಡುತ್ತಿದೆ ಎಂಬ ವರದಿಗಳಿಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ 25 ಶಾಸಸಕರಿರುವ ಪಕ್ಷ 40 ಶಾಸಕ ಬಲದ ಪಕ್ಷವನ್ನು ಸೋಲಿಸುತ್ತದೆ ಎಂದರೆ ಅದು ಕುದುರೆವ್ಯಾಪಾರವಲ್ಲದೇ ಮತ್ತೇನು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಹಿಮಾಚಲದಲ್ಲಿ ಅಧಿಕಾರ ನಡೆಸುವ ಹಕ್ಕು ಕಾಂಗ್ರೆಸ್‌ಗೆ ಜನ ನೀಡಿದ್ದಾರೆ. ಇದನ್ನು ಹಣಬಲದ ಮೂಲಕ ಹಾಳು ಮಾಡಲು ಯತ್ನಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಜನರಿಗೆ ಮಾಡುತ್ತಿರುವ ಅವಮಾನ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ತೀವ್ರ, ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ರಾಜೀನಾಮೆ!
ಇದೇ ವೇಳೆ ಒಂದು ಪಕ್ಷವಾಗಿ ಕಾಂಗ್ರೆಸ್ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಜನಾದೇಶಕ್ಕೆ ಮೋಸವಾಗಲು ಬಿಡುವುದಿಲ್ಲ. ಸರ್ಕಾರ ಉಳಿಸಲು ಸರ್ವ ಯತ್ನ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
ಹಿಮಾಚಲ ಬಿರುಗಾಳಿ ನಡುವೆ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಶಾಕ್, ಪಕ್ಷ ತೊರೆದ ರಾಜ್ಯಾಧ್ಯಕ್ಷ!