ಅರುಣಾಚಲಕ್ಕೆ ಮೊದಲ ವಿಮಾನ ನಿಲ್ದಾಣ: ಹೇಗಿದೆ ಗೊತ್ತಾ ಡೋನ್ಯಿ ಪೋಲೋ ಏರ್‌ಫೋರ್ಟ್?
- ಇಟಾನಗರ ವಿಮಾನ ನಿಲ್ದಾಣಕ್ಕೆ ಡೋನ್ಯಿ ಪೋಲೋ (ಸೂರ್ಯ ಚಂದ್ರ) ಎಂದು ಹೆಸರು
- ಇದು ಅರುಣಾಚಲದ ರಾಜಧಾನಿ ಇಟಾನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿದೆ
- ಇದರ ಉತ್ತರಕ್ಕೆ ಚೀನಾ, ಪೂರ್ವಕ್ಕೆ ಮ್ಯಾನ್ಮಾರ್, ಪಶ್ಚಿಮಕ್ಕೆ ಭೂತಾನ್ ದೇಶಗಳಿವೆ
ಇಟಾನಗರ: ಅರುಣಾಚಲ ಪ್ರದೇಶ ತನ್ನದು ಎಂದು ಸದಾ ಕ್ಯಾತೆ ತೆಗೆಯುವ ಚೀನಾಕ್ಕೆ ಸಡ್ಡು ಹೊಡೆದು ಸ್ಥಾಪಿಸಲಾಗಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು. ರಾಜಧಾನಿ ಇಟಾನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ಡೋನ್ಯಿ ಪೋಲೋ (ಸೂರ್ಯ ಚಂದ್ರ) ಎಂದು ಹೆಸರಿಡಲಾಗಿದ್ದು, ನಿರ್ಲಕ್ಷಿತ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಉತ್ತೇಜನದಲ್ಲಿ ಇದು ಹೊಸ ಶಕೆ ಆರಂಭಿಸಿದೆ ಎಂದು ಬಣ್ಣಿಸಲಾಗಿದೆ. ಈ ವಿಮಾನ ನಿಲ್ದಾಣದ ಉತ್ತರಕ್ಕೆ ಚೀನಾ(china), ಪೂರ್ವಕ್ಕೆ ಮ್ಯಾನ್ಮಾರ್ (Myanmar) ಹಾಗೂ ಪಶ್ಚಿಮಕ್ಕೆ ಭೂತಾನ್ (Bhootan)ದೇಶಗಳಿವೆ. ಹೀಗಾಗಿ ವಿಮಾನ ನಿಲ್ದಾಣವು ವ್ಯೂಹಾತ್ಮಕ ಹಾಗೂ ವಿಶಿಷ್ಟಸ್ಥಳದಲ್ಲಿ ನಿರ್ಮಾಣವಾಗಿದ್ದು, ಈವರೆಗೆ ಸಂಪರ್ಕ ದುಸ್ತರವಾಗಿದ್ದ ಅರುಣಾಚಲದ (Arunachal) ಜೊತೆಗೆ ಭಾರತದ ಬೇರೆ ಬೇರೆ ಭಾಗಗಳಿಗೆ ಇನ್ನು ಮುಂದೆ ಸುಲಭ ಸಂಪರ್ಕದ ಸೌಕರ್ಯವನ್ನು ಕಲ್ಪಿಸಲಿದೆ.
ಇಟಾನಗರ (Itanagar) ವಿಮಾನ ನಿಲ್ದಾಣಕ್ಕೆ 2019ರ ಫೆಬ್ರವರಿಯಲ್ಲಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಬಹಳ ಕಡಿಮೆ ಅವಧಿಯಲ್ಲಿ ವಿಮಾನ ನಿಲ್ದಾಣ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಏಕಕಾಲಕ್ಕೆ 300 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದ ಈ ವಿಮಾನ ನಿಲ್ದಾಣಕ್ಕೆ ಏರ್‌ಬಸ್-320, ಬೋಯಿಂಗ್-747ನಂತಹ ದೊಡ್ಡ ವಿಮಾನಗಳೂ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ವಿಮಾನಗಳು ಬಂದಿಳಿಯಬಹುದಾಗಿದೆ. ಗುಡ್ಡಗಾಡು ರಾಜ್ಯವಾಗಿರುವ ಅರುಣಾಚಲದ ಕ್ಲಿಷ್ಟಕರ ಭೂಪ್ರದೇಶದಲ್ಲಿ 640 ಕೋಟಿ ರು. ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ.
ಅಟ್ಕಾನ, ಲಟ್ಕಾನ, ಭಟ್ಕಾನ ಕಾಲ ಮುಗಿತು, ಅರುಣಾಚಲ ಏರ್‌ಪೋರ್ಟ್ ಉದ್ಘಾಟಿಸಿ ಮೋದಿ ಭಾಷಣ!
ಡೋನ್ಯಿ ಪೋಲೋ ವಿಶೇಷತೆ
- ಇಟಾನಗರ ವಿಮಾನ ನಿಲ್ದಾಣಕ್ಕೆ ಡೋನ್ಯಿ ಪೋಲೋ (ಸೂರ್ಯ ಚಂದ್ರ) ಎಂದು ಹೆಸರು
- ಇದು ಅರುಣಾಚಲದ ರಾಜಧಾನಿ ಇಟಾನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿದೆ
- ಇದರ ಉತ್ತರಕ್ಕೆ ಚೀನಾ, ಪೂರ್ವಕ್ಕೆ ಮ್ಯಾನ್ಮಾರ್, ಪಶ್ಚಿಮಕ್ಕೆ ಭೂತಾನ್ ದೇಶಗಳಿವೆ
- ಗುಡ್ಡಗಾಡಿನ ಕ್ಲಿಷ್ಟಕರ ಭೂಪ್ರದೇಶದಲ್ಲಿ 640 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ
- 2019ರಲ್ಲಿ ಶಂಕುಸ್ಥಾಪನೆ ಮಾಡಿದ್ದ ವಿಮಾನ ನಿಲ್ದಾಣ ಕೇವಲ 3 ವರ್ಷದಲ್ಲಿ ಪೂರ್ಣ
- ಸಂಪರ್ಕ ವ್ಯವಸ್ಥೆ ಕಷ್ಟವಿದ್ದ ಈಶಾನ್ಯ ರಾಜ್ಯಗಳಿಗೆ ಇದು ಸುಲಭ ಸಂಪರ್ಕ ಕಲ್ಪಿಸಲಿದೆ
- ಅರುಣಾಚಲ ತನ್ನದು ಎನ್ನುವ ಚೀನಾಕ್ಕೆ ಸಡ್ಡು ಹೊಡೆದು ಈ ಏರ್‌ಪೋರ್ಟ್ ನಿರ್ಮಾಣ
- ಏರ್‌ಬಸ್-320, ಬೋಯಿಂಗ್-747 ಸೇರಿ ಎಲ್ಲ ವಾಣಿಜ್ಯ ವಿಮಾನ ಇಳಿಸುವ ಸೌಕರ‍್ಯ
ಅರುಣಾಚಲದ ಅಭಿವೃದ್ಧಿಗೆ 50,000 ಕೋಟಿ- ಮೋದಿ:
ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಅರುಣಾಚಲ ಪ್ರದೇಶದ ಅಭಿವೃದ್ಧಿಗೆ 50,000 ಕೋಟಿ ರು. ವ್ಯಯಿಸಲಿದೆ. ರಾಜ್ಯದಲ್ಲಿ ಅದ್ಭುತ ಪ್ರಕೃತಿ ಸೌಂದರ್ಯವಿದೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಸಾಕಷ್ಟುಅವಕಾಶಗಳಿವೆ. ಶೇ.85ರಷ್ಟು ಹಳ್ಳಿಗಳಿಗೆ ಈಗಾಗಲೇ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿ 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಉತ್ಪಾದನೆ ಯೋಜನೆಯನ್ನು ಉದ್ಘಾಟಿಸಿದರು. 8450 ಕೋಟಿ ರು. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಮೋದಿ ಉದ್ಘಾಟಿಸಲಿರುವ ಅರುಣಾಚಲದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದಲ್ಲಿದೆ ಹಲವು ವಿಶೇಷತೆ!
ಈ ಏರ್‌ಪೋರ್ಟ್ ಅವರ ಮುಖಕ್ಕೆ ತಪರಾಕಿ
2019ರಲ್ಲಿ ನಾನು ಶಂಕುಸ್ಥಾಪನೆ ಮಾಡಿದ ಇಟಾನಗರ ವಿಮಾನ ನಿಲ್ದಾಣವನ್ನು ಈಗ ನಾನೇ ಲೋಕಾರ್ಪಣೆ ಮಾಡಿದ್ದೇನೆ. ಆಲಸ್ಯದ ದಿನಗಳು ಹೋದವು. ನಾನು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದಾಗ ಕೆಲ ರಾಜಕೀಯ ಪಂಡಿತರು ಇದು ಚುನಾವಣೆ ಗಿಮಿಕ್ ಎಂದಿದ್ದರು. ಈಗ ಯಾವುದೇ ಚುನಾವಣೆ ಹತ್ತಿರದಲ್ಲಿಲ್ಲ. ಈ ಏರ್‌ಪೋರ್ಟ್ ಉದ್ಘಾಟನೆ ಅವರ ಮುಖಕ್ಕೆ ಬಾರಿಸಿದ ತಪರಾಕಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.