ಕೋಲ್ಕತಾ[ಜ.15]: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳನ್ನು ನಾಯಿಗೆ ಹೊಡೆದು ಹಾಕಿದ ಹಾಗೆ ಹೊಡೆದಿದ್ದೇವೆ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ವಿರುದ್ಧ ಪಶ್ಚಿಮ ಬಂಗಾಳದಲ್ಲಿ 2 ಕೇಸು ದಾಖಲಿಸಲಾಗಿದೆ.

ನಾಡಿಯಾ ಹಾಗೂ ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಘೋಷ್‌ ವಿರುದ್ದ ದೂರು ಸಲ್ಲಿಸಲಾಗಿದೆ. ಈ ನಡುವೆ ದಿಲೀಪ್‌ ಘೋಷ್‌ರ ಈ ಹೇಳಿಕೆಯಿಂದ ಜನ ಭಯದಿಂದ ಜೀವಿಸುವಂತಾಗಿದೆ. ಘೋಷ್‌ ತಮ್ಮನ್ನೆಲ್ಲಿ ಹೊಡೆದು ಕೊಲ್ಲುತ್ತಾರೋ ಎಂಬ ಭೀತಿ ಹಲವರನ್ನು ಆವರಿಸಿಕೊಂಡಿದೆ ಎಂದು ಟಿಎಂಸಿ ನಾಯಕ ಹಾಗೂ ನಾಗರಿಕ ಪೂರೈಕೆ ಸಚಿವ ಜ್ಯೋತಿಪ್ರಿಯೊ ಮಲಿಕ್‌ ಹೇಳಿದ್ದಾರೆ.

ಭಾನುವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಸಭೆಯೊಂದರಲ್ಲಿ ಘೋಷ್‌ ಹೇಳಿದ್ದ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು.