ಸಣ್ಣ ಕಂಪನಿಗಳು ನೌಕರರನ್ನು ಕಿತ್ತೊಗೆದರೆ ಸರ್ಕಾರ ಕೇಳಲ್ಲ| ಲೋಕಸಭೆಯಲ್ಲಿ ಮಸೂದೆ ಮಂಡನೆ

ನವದೆಹಲಿ(ಸೆ.21): ಸಿಬ್ಬಂದಿ ನೇಮಕಾತಿ ಮತ್ತು ವಜಾ ವಿಷಯದಲ್ಲಿ ಕೈಗಾರಿಕೆಗಳಿಗೆ ಇನ್ನಷ್ಟುಸ್ವಾತಂತ್ರ್ಯ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ 100ಕ್ಕಿಂತ ಕಡಿಮೆ ಸಿಬ್ಬಂದಿ ಹೊಂದಿರುವ ಕೈಗಾರಿಕೆಗಳು ಮಾತ್ರವೇ ನೌಕರರ ನೇಮಕ ಮತ್ತು ವಜಾ ವಿಷಯದಲ್ಲಿ ಸರ್ಕಾರದ ಅನುಮತಿ ಇಲ್ಲದೇ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಅದನ್ನು ಈಗ 300ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ಕುರಿತ ‘ಕೈಗಾರಿಕಾ ಸಂಬಂಧಿ ಸಂಹಿತಿ ಮಸೂದೆ 2020’ನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಶನಿವಾರ ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಮಂಡಿಸಿದೆ.

ಶಾಲೆಗಳು ಆರಂಭ: ತೀರ್ಮಾನವನ್ನು ವಿದ್ಯಾರ್ಥಿಗಳಿಗೆ ಬಿಟ್ಟ ಸರ್ಕಾರ

ಕಳೆದ ವರ್ಷವೇ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಬಳಿಕ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಆಯ್ಕೆ ಸಮಿತಿ ಕೂಡ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಇಂಥ ನಿಯಮ ಜಾರಿಯಿಂದ ಹೊಸ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳವಾಗಿದೆ ಮತ್ತು ಉದ್ಯೋಗ ಕಡಿತ ಇಳಿಕೆಯಾಗಿದೆ ಎಂಬ ಉದಾಹರಣೆಗಳನ್ನು ನೀಡಿ ನೌಕರರ ನೇಮಕ ಮತ್ತು ವಜಾ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲದೆ ಕಂಪನಿಗಳು ನಿರ್ಧಾರ ಕೈಗೊಳ್ಳುವುದಕ್ಕೆ ಇದ್ದ 100 ಸಿಬ್ಬಂದಿಗಳ ಮಿತಿಯನ್ನು 300ಕ್ಕೆ ಏರಿಸಲು ಶಿಫಾರಸು ಮಾಡಿತ್ತು. ಅದರನ್ವಯ ಸರ್ಕಾರ ಹಳೆದ ಮಸೂದೆಯನ್ನು ಹಿಂದಕ್ಕೆ ಪಡೆದು, ಶನಿವಾರ ಹೊಸ ಮಸೂದೆ ಮಂಡಿಸಿದೆ.

ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆ ಸೇವೆ ಕಡ್ಡಾಯ: ಎಷ್ಟು ದಿನ?

ಹೊಸ ಮಸೂದೆಗಳು ಕಾರ್ಮಿಕರ ಹಕ್ಕುಗಳನ್ನು ಮತ್ತಷ್ಟುದುರ್ಬಲಗೊಳಿಸುತ್ತದೆ, ಅವರಿಗೆ ಕಾರ್ಮಿಕ ಸಂಘಟನೆಯ ಯಾವುದೇ ಬೆಂಬಲ ಸಿಗುವುದಿಲ್ಲ, ಈ ವಿಷಯದಲ್ಲಿ ಅವರ ಕಾನೂನು ಹೋರಾಟವನ್ನು ಕಠಿಣಗೊಳಿಸುತ್ತದೆ ಎಂಬುದು ಕಾರ್ಮಿಕ ಸಂಘಟನೆ ಮತ್ತು ವಿಪಕ್ಷಗಳ ವಾದ. ಇದೇ ಕಾರಣಕ್ಕೆ ಅವು ಮಸೂದೆಯನ್ನು ವಿರೋಧಿಸುತ್ತಿವೆ.