* ಮಧ್ಯಪ್ರದೇಶದ ವಸತಿ ಸಮುಚ್ಛಯದಲ್ಲಿ ಅನಾಹುತ* ಭಗ್ನ ಪ್ರೇಮಿ ಹಚ್ಚಿದ ಬೆಂಕಿಗೆ 7 ಜನರ ದಾರುಣ ಸಾವು!\* 9 ಜನರು ಗಂಭೀರವಾಗಿ ಗಾಯ
ಇಂದೋರ್: ಭಗ್ನಪ್ರೇಮಿಯೊಬ್ಬ ವಾಹನಕ್ಕೆ ಹಚ್ಚಿದ ಬೆಂಕಿ, ಇಡೀ ವಸತಿ ಸಮುಚ್ಛಯಕ್ಕೆ ಹಬ್ಬಿದ ಕಾರಣ, 7 ಜನರು ಸಾವನ್ನಪ್ಪಿ, ಇತರೆ 9 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ನಡೆದಿದೆ.
ಇಲ್ಲಿನ 3 ಮಹಡಿ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ನಿದ್ದೆಯ ಮಂಪರಿನಲ್ಲಿದ್ದ ಜನರಿಗೆ ಅರಿವಾಗುವುದರ ಒಳಗೆ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು. ಹೀಗಾಗಿ 7 ಜನರು ಸುಟ್ಟು ಕರಕಲಾಗಿ ಹೋಗಿದ್ದರು. ಹಲವರು ಮನೆಯ ಬಾಲ್ಕನಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದರು. ಈ ವೇಳೆ ಹಲವರಿಗೆ ತೀವ್ರ ಗಾಯಗಳಾಗಿತ್ತು. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರೂ, ಅವರು ತಕ್ಷಣಕ್ಕೆ ಬರಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದರು. ಪ್ರಾಥಮಿಕ ತನಿಖೆ ವೇಳೆ, ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ ಸಮೀಪದ ಸಿಸಿಟೀವಿ ಗಮನಿಸಿದಾಗ ವ್ಯಕ್ತಿಯೊಬ್ಬ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿದ್ದು, ಅದರಿಂದಲೇ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕಟ್ಟಡದಲ್ಲಿದ್ದ ಮಹಿಳೆಯೊಬ್ಬರು, ವ್ಯಕ್ತಿಯೊಬ್ಬನ ಪ್ರೀತಿ ನಿರಾಕರಿಸಿದ್ದಕ್ಕೆ ಆತ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗೆಳತಿಯ ತಾಯಿಯನ್ನೇ ಹತ್ಯೆಗೈದ!
ತಮ್ಮ ಅನೈತಿಕ ಸಂಬಂಧ ಅಡ್ಡಿಯಾಗಿದ್ದಾಳೆ ಎಂದು ಕೋಪಗೊಂಡು ಗೆಳತಿಯ ತಾಯಿಯನ್ನು ಕತ್ತು ಹಿಸುಕಿ ಕಿಡಿಗೇಡಿಯೊಬ್ಬ ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಸ್‌ವಿಜಿ ನಗರದ ನಿವಾಸಿ ನಂಜಮ್ಮ (50) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತಳ ಮಗಳ ಗೆಳೆಯ ರಾಘವೇಂದ್ರ ಅಲಿಯಾಸ್ ಗೆಡ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ವಿಚಾರ ಮಾತನಾಡುವ ನೆಪದಲ್ಲಿ ನಂಜಮ್ಮ ಮನೆಗೆ ಗುರುವಾರ ರಾತ್ರಿ ತೆರಳಿದ ಆರೋಪಿ, ಬಳಿಕ ಆಕೆಯನ್ನು ಹತ್ಯೆಗೈದು ಪರಾರಿಯಾಗಿದ್ದ. ತಮ್ಮ ಅಜ್ಜಿ ಮನೆಗೆ ಶುಕ್ರವಾರ ಮಧ್ಯಾಹ್ನ ಮೃತರ ಮೊಮ್ಮಕ್ಕಳು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಮನಗರ ಜಿಲ್ಲೆಯ ನಂಜಮ್ಮ, ಹಲವು ವರ್ಷಗಳಿಂದ ಗೋವಿಂದರಾಜ ನಗರ ಠಾಣಾ ವ್ಯಾಪ್ತಿಯ ಎಸ್‌ವಿಜಿ ನಗರದಲ್ಲಿ ನೆಲೆಸಿದ್ದರು. ಅಲ್ಲೇ ಸುತ್ತಮುತ್ತ ಮನೆಗಳಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ವಿವಾಹ ವಿಚ್ಛೇದನ ಪಡೆದಿದ್ದ ನಂಜಮ್ಮ ಪುತ್ರಿ ಸುಧಾ, ತಾಯಿ ಮನೆಯ ಹತ್ತಿರದಲ್ಲೇ ಇಬ್ಬರು ಮಕ್ಕಳ ಜತೆ ನೆಲೆಸಿದ್ದಳು. ನಾಲ್ಕೈದು ವರ್ಷಗಳ ಹಿಂದೆ ಸುಧಾಳಿಗೆ ಆನೇಕಲ್ ತಾಲೂಕಿನ ರಾಘವೇಂದ್ರ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಮೂಡಿದೆ.
ಕೊನೆಗೆ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ನಂಜಮ್ಮ, ಮಗಳಿಗೆ ರಾಘವೇಂದ್ರನಿಂದ ದೂರವಾಗುವಂತೆ ಒತ್ತಾಯಿಸುತ್ತಿದ್ದರು. ಇತ್ತೀಚೆಗೆ ಇದೇ ವಿಚಾರವಾಗಿ ನಂಜಮ್ಮ ಜತೆ ರಾಘವೇಂದ್ರ ಜಗಳವಾಡಿದ್ದ. ಇತ್ತ ತನ್ನ ತಾಯಿ ಮನೆಗೆ ಹೋಗುವುದಾಗಿ ಸುಧಾ ಹೇಳುತ್ತಿದ್ದಳು. ಇದರಿಂದ ಕೆರಳಿದ ರಾಘವೇಂದ್ರ, ತಮ್ಮ ಸಂಬಂಧ ಅಡ್ಡಿಪಡಿಸುತ್ತಿರುವ ನಂಜಮ್ಮ ಹತ್ಯೆಗೆ ನಿರ್ಧರಿಸಿದ್ದ. ಅಂತೆಯೇ ಗುರುವಾರ ರಾತ್ರಿ ನಂಜಮ್ಮ ಮನೆಗೆ ತೆರಳಿ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
