Asianet Suvarna News Asianet Suvarna News

ನಟಿ ತಾಪ್ಸಿ, ಅನುರಾಗ್ ಕಶ್ಯ​ಪ್‌ಗೆ ಐಟಿ ಬಿಸಿ!

ನಟಿ ತಾಪ್ಸಿ, ಕಶ್ಯ​ಪ್‌ಗೆ ಐಟಿ ಬಿಸಿ| ಬಾಲಿವುಡ್‌ ಸ್ಟಾರ್‌ಗಳ ಮೇಲೆ ತೆರಿಗೆ ದಾಳಿ| 30 ಸ್ಥಳಗಳಲ್ಲಿ ಶೋಧ| ತೆರಿಗೆ ವಂಚನೆ ಆರೋ​ಪದಡಿ ಶೋಧ| ಕೇಂದ್ರವನ್ನು ಟೀಕಿಸಿದ್ದ ನಟರು

Filmmaker Anurag Kashyap Actor Taapsee Pannu Face Income Tax Raids pod
Author
Bangalore, First Published Mar 4, 2021, 7:25 AM IST

ಮುಂಬೈ/​ನ​ವ​ದೆ​ಹ​ಲಿ(ಮಾ.04): ತೆರಿಗೆ ವಂಚನೆ ಆರೋಪದ ಪ್ರಕ​ರ​ಣ ಸಂಬಂಧ ಬಾಲಿ​ವುಡ್‌ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನು​ರಾಗ್‌ ಕಶ್ಯಪ್‌ ನಿವಾ​ಸ​ ಮತ್ತು ಅವರ ಕೆಲ ಉದ್ಯಮ ಸ್ನೇಹಿತರ ಮನೆ ಹಾಗೂ ಕಚೇ​ರಿ​ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮುಂಬೈ ಮತ್ತು ಪುಣೆಯ 30 ಸ್ಥಳಗಳ ಮೇಲೆ ಏಕಕಾಲದಲ್ಲಿ ನಡೆದ ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪುಣೆಯಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ತೆರಿಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ನಡುವೆ ತೆರಿಗೆ ದಾಳಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಕ್ತವಾಗಿ ಮಾತನಾಡಿದ್ದಕ್ಕಾಗಿ ಇಬ್ಬರ ಮೇಲೂ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಟೀಕಿಸಿವೆ.

ತೆರಿಗೆ ವಂಚನೆ:

2011ರಲ್ಲಿ ಅನುರಾಗ್‌ ಕಶ್ಯಪ್‌ ಫ್ಯಾಂಟಮ್‌ ಫಿಲ್ಸ್‌್ಮ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಇದರ ಮೂಲಕ ‘ಲುಟೇರಾ’, ‘ಕ್ವೀನ್‌’, ‘ಎನ್‌ಎಚ್‌10’, ‘ಉಡ್ತಾ ಪಂಜಾಬ್‌’ ಸೇರಿದಂತೆ ಹಲವು ಚಿತ್ರ ನಿರ್ಮಿಸಿದ್ದರು. ಅವರ ಈ ಉದ್ಯಮದಲ್ಲಿ ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕ ವಿಕಾಸ್‌ ಬಹಲ್‌, ಮಧು ಮಂಟೇನಾ ಪಾಲುದಾರರಾಗಿದ್ದರು. 2018ರಲ್ಲಿ ಈ ಸಂಸ್ಥೆಯನ್ನು ಮುಚ್ಚಿ ಕಶ್ಯಪ್‌ ಬೇರೊಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಆದರೆ ಈ ಚಿತ್ರಸಂಸ್ಥೆ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ನಡೆಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆದಾಯ ತೆರಿಗೆ ಇಲಾಖೆ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ದಾಳಿ ನಡೆಸಿದೆ.

ಬುಧವಾರ ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌, ರಿಲ​ಯನ್ಸ್‌ ಎಂಟ​ರ್‌​ಟೇ​ನ್‌​ಮೆಂಟ್‌ ಸಮೂ​ಹದ ಸಿಇಒ ಶಿಭಾಶೀಸ್‌ ಸರ್ಕಾರ್‌, ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಕ್ವಾನ್‌ ಮೇಲೆ ದಾಳಿ ನಡೆಸಲಾಗಿದೆ.

ಇದು ರಾಜ​ಕೀಯ ಪ್ರೇರಿ​ತ:

ನಟಿ ತಾಪ್ಸಿ ಪನ್ನು ಹಾಗೂ ಕಶ್ಯಪ್‌ ನಿವಾಸ ಮತ್ತು ಕಚೇ​ರಿ​ಗಳ ಮೇಲಿನ ಐ.ಟಿ ದಾಳಿ​ಯನ್ನು ಬಿಜೆ​ಪಿಯ ರಾಜ​ಕೀಯ ಪ್ರೇರಿತ ದಾಳಿ ಎಂದು ಮಹಾ​ರಾಷ್ಟ್ರದ ಆಡ​ಳಿ​ತಾ​ರೂಢ ಕಾಂಗ್ರೆಸ್‌ ಮತ್ತು ಎನ್‌​ಸಿಪಿ ಪಕ್ಷ​ಗಳು ದೂರಿವೆ. ಬಿಜೆ​ಪಿಯ ಜನ​ವಿ​ರೋಧಿ ನಿಲು​ವು​ಗಳ ವಿರುದ್ಧ ಧ್ವನಿ​ಯೆ​ತ್ತು​ವ​ವ​ರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆ​ಗ​ಳಾದ ಸಿಬಿಐ, ಜಾರಿ ನಿರ್ದೇ​ಶ​ನಾ​ಲಯ, ಆದಾಯ ತೆರಿಗೆ ಇಲಾ​ಖೆ​ಗ​ಳನ್ನು ಕೇಂದ್ರ ಸರ್ಕಾರ ದುರು​ಪ​ಯೋ​ಗ​ಪ​ಡಿ​ಸಿ​ಕೊ​ಳ್ಳು​ತ್ತಿದೆ ಎಂದು ಎನ್‌​ಸಿಪಿ ನಾಯಕ ನವಾಬ್‌ ಮಲಿಕ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. ಸತ್ಯ ಹೇಳಿದವರ ಬಾಯಿ ಮುಚ್ಚಿಸಲು ಇದು ಕೇಂದ್ರ ಸರ್ಕಾರ ಒತ್ತಡ ಹೇರುವ ತಂತ್ರದ ಭಾಗ ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಚವ್ಹಾಣ್‌ ಟೀಕಿಸಿದ್ದಾರೆ.

Follow Us:
Download App:
  • android
  • ios