Asianet Suvarna News Asianet Suvarna News

Deep Sidhu Died: ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪಂಜಾಬಿ ನಟ ದೀಪ್ ಸಿಧು  ದುರ್ಮರಣ

* ರೈತ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ದೀಪ್ ಸಿಧು ದುರ್ಮರಣ
* ರಸ್ತೆ ಅಪಘಾತದಲ್ಲಿ ಸಾವಿಗೀಡಾದ ನಟ
*ಕೆಎಂಪಿ ಹೆದ್ದಾರಿಯಲ್ಲಿ ಅಪಘಾತ 

Film actor and social activist Deep Sidhu killed in road accident Punjab mah
Author
Bengaluru, First Published Feb 15, 2022, 10:15 PM IST

ಚಂಡೀಘಡ(ಫೆ. 15) ಪಂಜಾಬಿ ಸಿನಿಮಾ ನಟ, ರೈತ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಈಡಾಗಿದ್ದಾರೆ.  ದೆಹಲಿ ಸಮೀಪದ (Kundli-Manesar highway) ಕೆಎಂಪಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಸಾವು ಕಂಡಿದ್ದಾರೆ.

ದೀಪ್ ಸಿಧು ಕಾರಿನಲ್ಲಿ ಪಂಜಾಬ್‌ಗೆ ತೆರಳುತಿದ್ದ ವೇಳೆ ಅಪಘಾತ ಸಂಭವಿಸಿದೆ. ಲಾರಿ ಹಿಂಭಾಗಕ್ಕೆ ಅತೀ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದೀಪ್ ಸಿಧು ತೀವ್ರವಾಗಿ ಗಾಯಗೊಂಡು ನಿಧನರಾಗಿದ್ದಾರೆ. ದೀಪ್ ಸಿಧು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ರೀನಾ ಅನ್ನೋ ಯುವತಿ ಕೂಡ ಇದ್ದರು. ಅಪಘಾತದಲ್ಲಿ ರೀನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋನಿಪತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರುವ ರೀನಾ ಭೇಟಿಯಾಗಿರುವ ಪೊಲೀಸರು ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಕೆಂಪುಕೋಟೆಗೆ ಹಾನಿ ಮಾಡಿದ ದೀಪ್ ಸಿಧುಗೆ ಜಾಮೀನು

ದೀಪ್ ಸಿಧು ತಮ್ಮ ಮಹೀಂದ್ರ ಸ್ಕಾರ್ಪಿಯೋ ವಾಹನದಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇಂದು(ಫೆ.15) ರಾತ್ರಿ 9.30 ಸುಮಾರಿಗೆ ಅಪಘಾತ ನಡೆದಿದೆ. ಸ್ಕಾರ್ಪಿಯೋ ವಾಹನ ಚಾಲನೆ ಮಾಡುತ್ತಿದ್ದ ದೀಪ್ ಸಿಧು, ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣವೇ ದೀಪ್ ಸಿಧು ಹಾಗೂ ಕಾರಿನಲ್ಲಿದ್ದ ಯುವತಿ ರೀನಾಳನ್ನು ಸೋನಿಪತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ದೀಪ್ ಸಿಧು ಪ್ರಾಣ ಪಕ್ಷಿ ಹಾರಿಹೋಗಿತ್ತು.

ದೀಪ್ ಸಿಧು ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ ಆಘಾತ ವ್ಯಕ್ತಪಡಿಸಿದ್ದಾರೆ. ದುರದೃಷ್ಟಕರ ಘಟನೆಯಿಂದ ದೀಪ್ ಸಿಧು ನಿಧನರಾಗಿದ್ದಾರೆ ಎಂದು ತಿಳಿದು ತೀವ್ರ ಬೇಸವಾಗಿದೆ. ಅವರ ಕುಟುಂಬ, ಆಪ್ತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

 

ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ತಂಡದಲ್ಲಿ ಪಂಜಾಬ್ ಚಿತ್ರನಟ ದೀಪ್ ಸಿಧು ಇದ್ದರು.  ಬಿಜೆಪಿ ಸಂಸದ ಸನ್ನಿ ಡಿಯೋಲ್ ಪರ ಈ ಹಿಂದೆ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದ ದೀಪ್ ಸಿಧು ಕಾಣಿಸಿಕೊಂಡಿದ್ದರು. 

ಗಣರಾಜ್ಯೋತ್ಸವದಂದು ಹಿಂಸಾಚಾರ: ಆರೋಪಿ ದೀಪ್ ಸಿಧು ಅರೆಸ್ಟ್!

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತರ ಪ್ರತಿಭಟನೆಯಲ್ಲಿ ದೀಪ್ ಸಿಧು ಪಾಲ್ಗೊಂಡು ಬಂಧನಕ್ಕೊಳಗಾಗಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ರೈತರನ್ನು ಪ್ರಚೋಚಿಸಿದ್ದ ದೀಪ್ ಸಿಧು, 2021ರ ಜನವರಿ 26ರ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದುಕೊಳ್ಳುವಲ್ಲಿ ದೀಪ್ ಸಿಧು ಪಾತ್ರ ನಿರ್ವಹಿಸಿದ್ದರು ಅನ್ನೋ ಆರೋಪವಿದೆ. ಇಷ್ಟೇ ಅಲ್ಲ ರೈತರ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರ, ಕೆಂಪು ಕೋಟೆಯಲ್ಲಿ ದಾಂಧಲೆ ಹಾಗೂ ಕೆಂಪು ಕೋಟೆ ಮೇಲಿನ ರಾಷ್ಟ್ರಧ್ವಜ ಕಿತ್ತೆಸೆದು ಖಲಿಸ್ತಾನ ಸಿಖ್ ಧ್ವಜ ಹಾರಿಸಿ ದೇಶದ್ರೋಹ ಕೆಲಸ ಮಾಡಿದ ಆರೋಪವೂ ದೀಪ್ ಸಿಧು ಮೇಲಿದೆ. ಈ ಘಟನೆ ಕುರಿತು ದೆಹಲಿ ಪೊಲೀಸರು ಫೆಬ್ರವರಿ 9, 2021ರಂದು ದೀಪ್ ಸಿಧನನ್ನು ಬಂಧಿಸಿದ್ದರು. .

ಏಪ್ರಿಲ್ 26 ರಂದು ದೀಪ್ ಸಿಧುಗೆ ನ್ಯಾಯಾಲಯ ಜಾಮೀನು ನೀಡಿತ್ತು. ಹಿಂಸಾಚಾರ ಘಟನಗೆ ಸಂಬಂಧಿಸಿ ಸಿಧು ಮೇಲೆ ಎರಡು ಎಫ್ಐಆರ್ ದಾಖಲಾಗಿದೆ.

Follow Us:
Download App:
  • android
  • ios