ನವದೆಹಲಿ(ಫೆ.09): ಗಣತಂತ್ರ ದಿನದಂದು ರೈರು ನಡೆಸಿದ್ದ ಟ್ರಾಕ್ಟರ್ ಪರೇಡ್‌ ವೇಳೆ ದೆಹಲಿಯಲ್ಲಿ ನಡೆದ ಹಿಂಚಾರದ ಆರೋಪಿ ದೀಪ್ ಸಿಧುರನ್ನು ದೆಹಲಿ ಪೊಲೀಸರ ವಿಶೇಷ ತಂಡ ಮಂಗಳವಾರ ಬಂಧಿಸಿದೆ. ಈ ಬಗ್ಗೆ ಮಾಹಿತಿ ನಿಡಿರುವ ಪೊಲೀಸರು ಸಿಧುನನ್ನು ಪಂಜಾಬ್‌ನ ಜೀರಕ್‌ಪುರದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದೀಪ್‌ ಸಿಧು ಹಾಗೂ ಇನ್ನಿತರ ಮೂವರು ಆರೋಪಿಗಳ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಟ್ರಾಕ್ಟರ್ ಪರೇಡ್‌ ಸಂದರ್ಭದಲ್ಲಿ ಹಿಂಸಾಚಾರ ನಡೆಸಲು ಪ್ರೇರೇಪಣೆ ನೀಡಿದ ಆರೋಪಿಗಳಲ್ಲಿ ಸಿಧು ಹೆಸರು ಕೇಳಿ ಬಂದಿತ್ತು. 

ಆಗಿದ್ದೇನು?

ಜನವರಿ 26 ರಂದು ನಡೆದ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದರು.

ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದರೆಂಬ ಆರೋಪವನ್ನು ದೀಪ್ ಸಿಧು ಬಲವಾಗಿ ತಳ್ಳಿಹಾಕಿದ್ದಾರೆ. ತಮ್ಮ ಮೇಲಿನ ಆರೋಪವು ರೈತರ ಪ್ರತಿಭಟನೆಯನ್ನ ಹತ್ತಿಕ್ಕುವ ಷಡ್ಯಂತ್ರ ಎಂದು ಪ್ರತ್ಯಾರೋಪ ಮಾಡಿ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದರು.