ರೇವಂತ್ ರೆಡ್ಡಿ ಸರ್ಕಾರ ರಚನೆಯಾಗ್ತಿದ್ದಂತೆ ಕಡತ ಹರಿದು ಹಾಕಿದ ಮಾಜಿ ಸಚಿವರ ಸಹಾಯಕ; ಕಳ್ಳತನಕ್ಕೂ ಯತ್ನ!
ಕೆಲವು ಭದ್ರತಾ ಕ್ಯಾಮೆರಾಗಳು ಮುರಿದು ಗೋಡೆಗಳ ಮೇಲೆ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆರೋಪ ಸಂಬಂಧ ಎಲ್ಲಾ ನಾಲ್ವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ (ಡಿಸೆಂಬರ್ 10, 2023): ತೆಲಂಗಾಣದಲ್ಲಿ ಕೆಲ ದಿನಗಳ ಹಿಂದಷ್ಟೇ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಡುವೆ, ಶುಕ್ರವಾರ ತೆಲಂಗಾಣದ ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಚೇರಿಯಲ್ಲಿನ ಕಡತಗಳು ಮತ್ತು ಭದ್ರತಾ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಮಾಜಿ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರ ವಿಶೇಷ ಕರ್ತವ್ಯದ ಅಧಿಕಾರಿ (OSD) ವಿರುದ್ಧ ದೂರು ದಾಖಲಿಸಲಾಗಿದೆ. ಕಚೇರಿಯಲ್ಲಿ ವಾಚ್‌ಮನ್ ನೀಡಿದ ದೂರಿನ ಆಧಾರದ ಮೇಲೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಕಲ್ಯಾಣ್ ಕುಮಾರ್ ಮತ್ತು ಇತರ ನಾಲ್ವರ ವಿರುದ್ಧ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ರೇವಂತ್ ರೆಡ್ಡಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ಸಚಿವನೂ ಇಲ್ಲ: ಬಂದೂಕು ಹಿಡಿದಿದ್ದ ನಕ್ಸಲ್ ಸೀತಕ್ಕ ಈಗ ತೆಲಂಗಾಣ ಸಚಿವೆ
ಕಚೇರಿಗೆ ನುಗ್ಗಲು ಕಿಟಕಿಯ ಗ್ರಿಲ್ ತೆಗೆದಿರುವುದು ತನಿಖೆ ವೇಳೆ ತಿಳಿದುಬಂದಿದೆ. ಸಾಮಾನ್ಯ ತಪಾಸಣೆ ನಡೆಸುತ್ತಿದ್ದ ವೇಳೆ ಕಲ್ಯಾಣ್ ಕುಮಾರ್ ಕಚೇರಿಯನ್ನು ಧ್ವಂಸಗೊಳಿಸಿದ ಮತ್ತು ಕಾಗದಗಳನ್ನು ಹರಿದು, ದೊಡ್ಡ ಚೀಲಗಳಲ್ಲಿ ಎಸೆದಿದ್ದನ್ನು ನೋಡಿದ್ದಾಗಿ ವಾಚ್‌ಮೆನ್ ಪೊಲೀಸರಿಗೆ ತಿಳಿಸಿದರು. ಘಟನೆಯ ಸಮಯದಲ್ಲಿ ಕಲ್ಯಾಣ್ ಕುಮಾರ್ ಮತ್ತು ಇತರ ನಾಲ್ವರು ವ್ಯಕ್ತಿಗಳಾದ ಮೋಹನ್, ಎಲಿಜಾ, ವೆಂಕಟೇಶ್ ಮತ್ತು ಪ್ರಶಾಂತ್ ಅವರನ್ನು ಕಚೇರಿ ಕಾರಿಡಾರ್‌ನಲ್ಲಿ ನೋಡಿದ್ದೇನೆ ಎಂದೂ ಅವರು ಹೇಳಿದರು. ಈ ನಾಲ್ಕು ಜನರ ಸಹಾಯದಿಂದ ಕಲ್ಯಾಣ್ ಕುಮಾರ್ ಕೆಲವು ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿರಬಹುದು ಎಂದು ನಾನು ಶಂಕಿಸುತ್ತೇನೆ ಎಂದೂ ವಾಚ್‌ಮನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ಭದ್ರತಾ ಕ್ಯಾಮೆರಾಗಳು ಮುರಿದು ಗೋಡೆಗಳ ಮೇಲೆ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆರೋಪ ಸಂಬಂಧ ಎಲ್ಲಾ ನಾಲ್ವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಚುನಾವಣಾ ಭರವಸೆ: ಗ್ಯಾರಂಟಿ ಜಾರಿಗೆ ಹಣದ ಬರ?
ಅಲ್ಲದೆ, ಶಿಕ್ಷಣ ಇಲಾಖೆಯ ಕಚೇರಿಯಿಂದ ಕಡತಗಳನ್ನು ಆಟೋರಿಕ್ಷಾಕ್ಕೆ ತುಂಬಿಕೊಂಡು ಕಳ್ಳತನಕ್ಕೆ ಯತ್ನಿಸಿದ ಘಟನೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಆಟೋ ಚಾಲಕ ಕಚೇರಿ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ!