ಪ್ರವಾದಿ ಮೊಹಮದ್ ಪೈಗಂಬರ್‌ ಕುರಿತಾಗಿ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಮಾಡಿರುವ ಕಾಮೆಂಟ್‌ಗಳಿಗೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ವೇಳೆ, ತೆಲಂಗಾಣದ ಕಾಂಗ್ರೆಸ್‌ ನಾಯಕರೊಬ್ಬರು ಮುಸ್ಲೀಮರಿಗೆ, ಟಿ ರಾಜಾ ಸಿಂಗ್‌ ನಿಮಗೆ ಕಂಡ ಕಂಡಲ್ಲಿ ಥಳಿಸಿ ಎಂದು ಮನವಿ ಮಾಡಿದ್ದಾರೆ. 

ಹೈದರಾಬಾದ್ (ಆ.24): ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ಮಾಡಿರುವ ಕಾಮೆಂಟ್‌ಗಳ ಬಗ್ಗೆ ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಅವರ ಕಾಮೆಂಟ್‌ಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಆರಂಭವಾಗಿದೆ. ಇದರ ನಡುವೆ, ತೆಲಂಗಾಣದ ಕಾಂಗ್ರೆಸ್‌ ನಾಯಕ ಫಿರೋಜ್‌ ಖಾನ್‌ ಅವರ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಅವರು, ಮುಸ್ಲೀಮರಿಗೆ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಹೇಳಿದ್ದು, ಪ್ರವಾದಿಯ ಕುರಿತಾಗಿ ಮಾತನಾಡಿದ್ದ ಟಿ.ರಾಜಾ ಸಿಂಗ್‌ ಅವರನ್ನು ಕಂಡ ಕಂಡಲ್ಲಿ ಥಳಿಸಬೇಕು ಎಂದು ಮಾತನಾಡಿದ್ದಾರೆ. ಅದಲ್ಲದೆ ತಮ್ಮ ವಿಡಿಯೋದಲ್ಲಿ ಟಿ ರಾಜಾ ಸಿಂಗ್‌ ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರವಾದಿ ಪೈಗಂಬರ್‌ ಅವರು ಇಡೀ ಮುಸ್ಲಿಂ ಸಮುದಾಯದ ಹೀರೋ ಎಂದು ಫಿರೋಜ್‌ ಖಾನ್‌ ಹೇಳಿದ್ದಾರೆ. ನೇರವಾಗಿ ಕ್ಯಾಮೆರಾದ ಎದುರುಗಡೆ ಕಾಂಗ್ರೆಸ್ ನಾಯಕ ಈ ಮಾತನ್ನು ಹೇಳಿದ್ದಾರೆ. ಟಿ ರಾಜಾ ಸಿಂಗ್ ಧ್ರುವೀಕರಣದ ರಾಜಕೀಯ ಮಾಡಲು ಬಯಸುತ್ತಾರೆ. ಅವನನ್ನು ಜೈಲಿಗೆ ಹಾಕಿ. ತಮ್ಮ ಹೇಳಿಕೆಗೆ ರಾಜಾ ಸಿಂಗ್ ಕ್ಷಮೆಯಾಚಿಸಬೇಕು. ಪ್ರವಾದಿ ನಮ್ಮ ನಾಯಕ. ಅವನು ಕ್ಷಮೆ ಯಾಚಿಸದಿದ್ದರೆ, ಹೈದರಾಬಾದ್‌ನಲ್ಲಿರುವ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿ, ರಾಜಾ ಸಿಂಗ್‌ರನ್ನು ಎಲ್ಲೆಲ್ಲಿ ಕಂಡರೂ ಅಲ್ಲೆಲ್ಲಾ ಅವರನ್ನು ಥಳಿಸಬೇಕು ಎಂದು ನಾನು ಬಯಸುತ್ತೇನೆ. ನಾವು ಕಾನೂನನ್ನು ಒಮ್ಮೊಮ್ಮೆ ಮಾತ್ರವಲ್ಲ, ಸಾಕಷ್ಟು ಬಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ನೇರವಾಗಿ ಎಚ್ಚರಿಕೆ ಹಾಕಿದ್ದಾರೆ.

ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ಮಾತನಾಡಿದ್ದ ಕಾರಣಕ್ಕಾಗಿ ಬಿಜೆಪಿಯ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಮಂಗಳವಾರ ಹೈದರಾಬಾದ್‌ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಹಲವಾರು ಸ್ಥಳಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ಎಫ್‌ಐಆರ್ ಕೂಡ ದಾಖಲಾಗಿತ್ತು.

ಪ್ರವಾದಿ ಪೈಗಂಬರ್‌ ಕುರಿತಾಗಿ ಹೇಳಿಕೆ, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಬಂಧನ, ಪಕ್ಷದಿಂದ ಅಮಾನತು!

ಇಸ್ಲಾಂ ಹಾಗೂ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಟಿ.ರಾಜಾ ಸಿಂಗ್‌ ಅವರು ಮಾತನಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಆದ ಬೆನ್ನಲ್ಲಿಯೇ ದೊಡ್ಡ ಮಟ್ಟದ ಪ್ರತಿಭಟನೆಗಳು ಆರಂಭವಾಗಿದ್ದವು. ಅದರಲ್ಲೂ ಮಂಗಳವಾರ ಅವರನ್ನು ಬಂದನ ಮಾಡುವ ವೇಳೆ, ರೋಷದಲ್ಲಿದ್ದ ಕೆಲವು ಪ್ರತಿಭಟನಾಕಾರರು, 'ಸರ್‌ ತನ್‌ ಸೆ ಜುದಾ' (ಶಿರಚ್ಛೇದದ ಘೋಷಣೆ) ಅನ್ನೂ ಕೂಗಿದ್ದರು. ಸಿಂಗ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು ಮತ್ತು ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದರು.

ಪ್ರವಾದಿ ವಿರುದ್ದ ಹೇಳಿಕೆ ನೀಡಿ ಅರೆಸ್ಟ್ ಆಗಿದ್ದ ಬಿಜೆಪಿ ನಾಯಕ ರಾಜಾ ಸಿಂಗ್‌ಗೆ ಜಾಮೀನು!

ಮಂಗಳವಾರ ಬೆಳಗ್ಗೆ ಹೈದರಾಬಾದ್‌ ಪೊಲೀಸರು ರಾಜಾ ಸಿಂಗ್‌ ಅವರನ್ನು ಬಂಧನ ಮಾಡಿದ್ದರು. ಆದರೆ, ಬಂಧನ ಮಾಡಿದ ಬೆನ್ನಲ್ಲಿಯೇ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿತ್ತು. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಿಂಗ್, ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 (ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಬಂಧಿಸಲಾಗಿತ್ತು.

ನೂಪುರ್‌ ಶರ್ಮ ಬಳಿಕ ವಿವಾದದ ಕಿಡಿ ಹೊತ್ತಿಸಿದ್ದ ರಾಜಾ ಸಿಂಗ್‌ ಅವರನ್ನು ಬಂಧನ ಮಾಡಿದ ಕೆಲವೇ ಹೊತ್ತಿನಲ್ಲಿಯೇ ನಾಂಪಲ್ಲಿ ಕ್ರಿಮಿನಲ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿದ್ದವು. ಕೋರ್ಟ್‌ ಹೊರಾಂಗಣದಲ್ಲಿ ಅವರನ್ನು ಸ್ವಾಗತಿಸಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.ಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ಪ್ರತಿಭಟನೆ ಜೋರಾಗಿದೆ. ಟಿ ರಾಜಾ ಸಿಂಗ್ ಕೋರ್ಟ್‌ಗೆ ಹಾಜರುಪಡಿಸುವ ಮೊದಲೇ ಪೊಲೀಸರು ಭಾರಿ ಭದ್ರತೆ ನಿಯೋಜಿಸಿತ್ತು. ಹೀಗಾಗಿ ಅಹಿತಕರ ಘಟನೆಗಳು ತಪ್ಪಿದ್ದವು.