ತಮಿಳುನಾಡಿನಲ್ಲಿ ನಿಲ್ಲದ 'ಫೆಂಗಲ್'ಅಬ್ಬರ : ತಿರುವಣಾಮಲೈ, ಕೃಷ್ಣಗಿರಿ ತತ್ತರ
ಫೆಂಗಲ್ ಚಂಡಮಾರುತದಿಂದ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗಿದ್ದು, ತಿರುವಣ್ಣಾಮಲೈ, ವಿಲ್ಲುಪುರಂ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ತಿರುವಣ್ಣಾಮಲೈನಲ್ಲಿ ಭೂಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ.
ಚೆನ್ನೈ: ಫೆಂಗಲ್ ಚಂಡಮಾರುತ ಕ್ಷೀಣಿಸಿದ್ದರೂ ಅದು ಸಂಪೂರ್ಣ ನಿರ್ಗಮಿಸದ ಪರಿಣಾಮ ತಮಿಳುನಾಡಿನ ಹಲವೆಡೆ ಸೋಮವಾರವೂ ಭಾರಿ ಮಳೆಯಾಗಿದ್ದು, ತಿರುವಣ್ಣಾಮಲೈ ವಿಲ್ಲುಪುರಂ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳು ಭಾರೀ ಪ್ರವಾಹದಿಂದಾಗಿ ತತ್ತರಿಸಿವೆ. ಶ್ರೀಕ್ಷೇತ್ರ ತಿರುವಣ್ಣಾಮಲೈನಲ್ಲಿ ಭೂಕುಸಿತ ಸಂಭವಿಸಿ 7 ಜನ ಬಲಿಯಾಗಿದ್ದು, 3 ದಿನದಲ್ಲಿ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 14ಕ್ಕೇರಿದೆ.
ಹಲವೆಡೆ ರೈಲುಗಳ ಸಂಚಾರ ರದ್ದುಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ವಿಲ್ಲುಪುರಂನಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ಸಂತ್ರಸ್ತರ ಸಂಕಷ್ಟ ಆಲಿಸಿ ಪರಿಹಾರ ವಸ್ತುಗಳನ್ನು ವಿತರಿಸಿದ್ದಾರೆ.
ತಿರುವಣ್ಣಾಮಲೈ ತತ್ತರ:
ಶ್ರೀಕ್ಷೇತ್ರ ತಿರುವಣ್ಣಾಮಲೈನಲ್ಲಿ ಸೋಮವಾರ ಮಧ್ಯಾಹ್ನ 2ನೇ ಭೂಕುಸಿತ ಸಂಭವಿಸಿದೆ, ವಸತಿ ಕಟ್ಟಡದ ಮೇಲೆ ಬಂಡೆಯೊಂದು ಬಿದ್ದು 7 ಜನ ಅಸುನೀಗಿದ್ದಾರೆ. ಭಾನುವಾರಪ್ರಸಿದ್ಧ ಅಣ್ಣಾಮಲೈಯಾರ್ ಬೆಟ್ಟದ ಕೆಳಗಿನ ಇಳಿಜಾರಿನಲ್ಲಿ ಮೊದಲ ಭೂಕುಸಿತ ಸಂಭವಿಸಿತ್ತು.
3 ದಶಕದ ಪ್ರವಾಹ:
ವಿಲ್ಲುಪುರಂನಲ್ಲಿ ಕಂಡು ಕೇಳರಿಯದ ಮಳೆ, 30 ವರ್ಷದ ಗರಿಷ್ಠ ಪ್ರವಾಹದ ಕಾರಣಕ್ಕೆ ನೂರಾರು ಮಂದಿ ಸಂತ್ರಸ್ತರಾಗಿದ್ದು, ಅವರಿಗೆ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಇನ್ನು ವಿಲ್ಲುಪುರಂ ಜಿಲ್ಲೆ ಮೂಲಕ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಚೆನ್ನೈ-ತಿರುಚಿನಾಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
50 ಸೆಂ.ಮೀ. ಮಳೆಗೆ ಕೃಷ್ಣಗಿರಿ ತತ್ತರ:
ಇನ್ನು ಬೆಂಗಳೂರಿಗೆ ಹೊಂದಿಕೊಂಡಿರುವ ಕಷ್ಣಗಿರಿ ಜಿಲ್ಲೆ 2-3 ದಶಕದ ಬಳಿಕ ಭಾರೀ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಕೃಷ್ಣಗಿರಿಯ ಉತ್ತಂಗರೈ ಎಂಬಲ್ಲಿ 50 ಸೆಂ.ಮೀ. ಮಳೆ ಆಗಿದ್ದು, ಕೆರೆ ಒಡೆದು ಉಂಟಾದ ಪ್ರವಾಹದಿಂದಾಗಿ ಹಲವಾರು ಪ್ರವಾಸಿ ವಾಹನಗಳು ಕೊಚ್ಚಿಹೋಗಿವೆ. ಇವುಗಳಲ್ಲಿ ರಸ್ತೆ ಬದಿ ಇದ್ದ ಮಿನಿ ಬಸ್, ಟೆಂಪೋ, ಕಾರು ಮತ್ತಿತರ ವಾಹನಗಳು ಸೇರಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.