Asianet Suvarna News Asianet Suvarna News

ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

ನಮೀಬಿಯಾದಿಂದ ಕಳೆದ ವರ್ಷ ಕರೆತರಲಾಗಿದ್ದ 5 ವರ್ಷದ ಸಾಶಾ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿದೆ. ಕೆಲವು ತಿಂಗಳ ಹಿಂದೆ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಅವುಗಳ ಪೈಕಿ ಸಾಶಾ ಕೂಡ ಒಂದಾಗಿತ್ತು. ಕಿಡ್ನಿ ಸೋಂಕಿನಿಂದ ಸಾಶಾ ಬಳಲುತ್ತಿದ್ದಳು ಎಂದು ಕುನೋ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Female cheetah died in Kuno National Park 5 year old Sasha was brought from Namibia san
Author
First Published Mar 27, 2023, 9:09 PM IST

ಭೋಪಾಲ್‌ (ಮಾ.27): ಮಧ್ಯಪ್ರದೇಶದ ಶಿಯೋಪುರದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷದ ಅಂತ್ಯದಲ್ಲಿ ನಮೀಬಿಯಾದಿಂದ ತಂದ ಹೆಣ್ಣು ಚೀತಾ ಸಾವನ್ನಪ್ಪಿರುವ ಬಗ್ಗೆ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 5 ವರ್ಷದ ಸಾಶಾ ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದಳು. ಜನವರಿ 22 ರಿಂದಲೇ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ವರದಿಯಾಗಿತ್ತು. ಭಾರತಕ್ಕೆ ಬರುವ ಮುನ್ನವೇ ಸಾಶಾಗೆ ಕಿಡ್ನಿ ಸಮಸ್ಯೆ ಇತ್ತು. ಆಕೆಗೆ ನಮೀಬಿಯಾದಲ್ಲಿ ಆಪರೇಷನ್‌ ಕೂಡ ಆಗಿತ್ತು ಎಂದು ವರದಿಯಾಗಿದೆ. ಆದರೆ, ಈ ಮಾಹಿತಿಯನ್ನು ನಮೀಬಿಯಾದ ಅಧಿಕಾರಿಗಳು ಭಾರತಕ್ಕೆ ಮಾಹಿತಿ ನೀಡಿದ್ದರೇ ಇಲ್ಲವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಜನವರಿ 22 ಹಾಗೂ 23ರ ನಡುವೆ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣದಲ್ಲಿ ಕಂಪಾರ್ಟ್‌ಮೆಂಟ್ ಸಂಖ್ಯೆ 5 ರಲ್ಲಿ ಸವನ್ನಾ ಮತ್ತು ಸಿಯಾ ಎಂಬ ಎರಡು ಹೆಣ್ಣು ಚೀತಾಗಳೊಂದಿಗೆ ವಾಸಿಸುತ್ತಿದ್ದ ಹೆಣ್ಣು ಚೀತಾ ಸಾಶಾದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದವು. ಆ ಬಳಿಕ ಸಾಶಾಳನ್ನು ದೊಡ್ಡ ಆವರಣದಿಂದ ಚಿಕ್ಕ ಆವರಣಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಅದರೊಂದಿಗೆ ಆಕೆಯ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆದರೆ, ಸಾಶಾ ಆಹಾರ ಸೇವನೆ ಮಾಡುತ್ತಿರಲಿಲ್ಲ ಹಾಗೂ ಎಲ್ಲದರಲ್ಲೂ ನಿರಾಸಕ್ತಿ ತೋರುತ್ತಿದ್ದಳು. ಇದಾದ ನಂತರ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಮೂವರು ವೈದ್ಯರು ಮತ್ತು ಭೋಪಾಲ್‌ನಿಂದ ಆಗಮಿಸಿದ ವೈದ್ಯರು ಅವಳನ್ನು ಪರೀಕ್ಷಿಸಿದಾಗ, ಹೆಣ್ಣು ಚೀತಾದ ಮೂತ್ರಪಿಂಡದಲ್ಲಿ ಸೋಂಕು ಇರುವುದು ಗೊತ್ತಾಗಿತ್ತು.

ಭಾರತಕ್ಕೆ ಬಂದಿತ್ತು 8 ಚೀತಾ: ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತವಾಗಿ  ನಮೀಬಿಯಾದಿಂದ ತಂದ 8 ಚೀತಾಗಳನ್ನು (5 ಹೆಣ್ಣು ಮತ್ತು 3 ಗಂಡು) ತರಲಾಗಿತ್ತು. ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇದನ್ನು ಸ್ವತಃ ಮೋದಿ ಬಿಡುಗಡೆ ಮಾಡಿದ್ದರು. ಎಲ್ಲಾ 8 ಚೀತಾಗಳು ಕಳೆದ ನಾಲ್ಕು ತಿಂಗಳುಗಳಲ್ಲಿ ತಮ್ಮ ಹೊಸ ಮನೆಯಾದ ಕುನೋದಲ್ಲಿ ಬದುಕುಳಿಯಲು ಪ್ರಾರಂಭಿಸಿದ್ದವು. ಸಾಶಾ ಸಾವು ಕಂಡಿದ್ದರೆ, ಉಳಿದೆಲ್ಲಾ ಚೀತಾಗಳು ಆರೋಗ್ಯವಾಗಿದ್ದು ಬೇಟೆಯಾಡಲು ಆರಂಭಿಸಿದೆ.  ಜನವರಿ 22 ರಂದು ಮೊದಲ ಬಾರಿಗೆ ಸಾಶಾ ಅನಾರೋಗ್ಯದ ಬಗ್ಗೆ ಸುದ್ದಿಯಾಗಿತ್ತು. ಚೀತಾಗಳ ತಜ್ಞ ಡಾ. ಆಡ್ರಿಯನ್ ಟೋರ್ಡಿಫ್ ಅವರೊಂದಿಗೆ ಸಮಾಲೋಚಿಸಿ ಚಿಕಿತ್ಸೆಯನ್ನು ಸಹ ಮಾಡಲಾಗಿತ್ತು. ಆದರೆ, ಬದುಕಿಸಲು ಸಾಧ್ಯವಾಗಿಲ್ಲ.

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

ಭಾರತಕ್ಕೆ ಬರುವ ಮುನ್ನವೇ ಇತ್ತು ಆರೋಗ್ಯ ಸಮಸ್ಯೆ: ಸಾಶಾಗೆ ಮಾಡಿದ ಪರೀಕ್ಷೆಗಳ ಪ್ರಕಾರ, ಮೂತ್ರಪಿಂಡದ ಸಮಸ್ಯೆ ಇತ್ತು ಎನ್ನಲಾಗಿದೆ.  ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಡೆಹ್ರಾಡೂನ್ ಮತ್ತು ಕುನೋ ನ್ಯಾಷನಲ್ ಪಾರ್ಕ್ ಮ್ಯಾನೇಜ್‌ಮೆಂಟ್‌ನ ಹಿರಿಯ ವಿಜ್ಞಾನಿಗಳು ನಮೀಬಿಯಾದಲ್ಲಿನ ಚೀತಾ ಕನ್ಸರ್ವೇಶನ್ ಫೌಂಡೇಶನ್‌ನಿಂದ ಸಾಶಾಗೆ ನೀಡಿದ್ದ ಚಿಕಿತ್ಸೆಯ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. 2022ರ ಆಗಸ್ಟ್‌ 15 ರಂದು ಕೊನೆಯ ಬಾರಿಗೆ ನಡೆಸಿದ ಪರೀಕ್ಷೆಯಲ್ಲೂ ಸಾಶಾದ ರಕ್ತದಲ್ಲಿ ಕೆರೆಟಿನ್‌ ಕ್ರಿಯೇಟಿನೈನ್‌ ಮಟ್ಟ 400ಕ್ಕಿಂತ ಹೆಚ್ಚಿತ್ತು. ಅದರೊಂದಿಗೆ ಆಕೆಗೆ ಈ ಮೊದಲೇ ಕಿಡ್ನಿ ಸಮಸ್ಯೆ ಇತ್ತು ಎನ್ನುವುದು ಖಚಿತಗೊಂಡಿದೆ.

ಕುನೋದಲ್ಲಿ 20 ಚೀತಾಗಳಿಗೆ ಬೇಕಾದಷ್ಟುಆಹಾರವಿಲ್ಲ!

ದಕ್ಷಿಣ ಆಫ್ರಿಕಾದಿಂದಲೂ 12 ಚೀತಾ ಭಾರತಕ್ಕೆ: ಫೆಬ್ರವರಿ 18 ರಂದು 12 ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಇವುಗಳಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳು ಕ್ವಾರಂಟೈನ್ ಆವರಣಗಳಲ್ಲಿ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿವೆ. ಇವುಗಳನ್ನು ಕಾಡಿಗೆ ಬಿಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಪ್ರಸ್ತುತ ಕೇವಲ 4 ನಮೀಬಿಯಾ ಚೀತಾಗಳನ್ನು ತೆರೆದ ಅರಣ್ಯದಲ್ಲಿ ಬಿಡಲಾಗಿದೆ.

Follow Us:
Download App:
  • android
  • ios