ಲಖನೌ(ಡಿ.28): ವಿವಾಹ ಮತ್ತು ಇನ್ನಿತರ ಕಾರಣಕ್ಕೆ ನಡೆಯುವ ಅಕ್ರಮ ಮತಾಂತರ ತಡೆಗಾಗಿ ಉತ್ತರ ಪ್ರದೇಶ ಸರ್ಕಾರ ಕಠಿಣ ಲವ್‌ ಜಿಹಾದ್‌ ಕಾನೂನು ಜಾರಿಗೆ ತಂದಿರುವ ಬೆನ್ನಲ್ಲೇ, ಈ ಕಾನೂನು ಮತ್ತು ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪರಸ್ಪರ ಪ್ರೇಮಿಸುತ್ತಿದ್ದ ಅನ್ಯಧರ್ಮದ ಯುವಕ-ಯುವತಿಯರು ಉತ್ತರ ಪ್ರದೇಶದಿಂದ ನೆರೆಯ ರಾಜ್ಯಗಳಿಗೆ ಪರಾರಿಯಾಗುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿ, ರಾಜಸ್ಥಾನ ಸೇರಿದಂತೆ ಇನ್ನಿತರ ನೆರೆಯ ರಾಜ್ಯಗಳಿಗೆ ಈ ಜೋಡಿಗಳು ಪಲಾಯನಗೈಯ್ಯುತ್ತಿದ್ದು, ಅಲ್ಲಿಯೇ ಮದುವೆಯಾಗಿ, ಕಾನೂನಿನಡಿ ರಕ್ಷಣೆ ಪಡೆಯಲು ಮುಂದಾಗುತ್ತಿವೆ. ಕೆಲ ಪ್ರೇಮಿಗಳು ತಾವು ಯಾವುದೇ ಕಾರಣಕ್ಕೂ ರಾಜ್ಯ ಬಿಟ್ಟು ಓಡಿಹೋಗಲ್ಲ. ಅಗತ್ಯಬಿದ್ದರೆ ಹಿಂದು ಧರ್ಮಕ್ಕೆ ಮತಾಂತರವಾಗಲು ಸಿದ್ಧ ಎಂದು ಹೇಳಿಕೊಂಡಿವೆ ಎಂದು ವರದಿಗಳು ತಿಳಿಸಿವೆ.

ಲವ್‌ ಜಿಹಾದ್ ತಡೆ ಕಾನೂನಿಗೆ ತಿಂಗಳು, ಈವರೆಗೆ 35 ಜನರ ಬಂಧನ

 

ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ಮತಾಂತರ ತಡೆ ಸುಗ್ರೀವಾಜ್ಞೆ ಜಾರಿಯಾಗಿ ತಿಂಗಳು ಕಳೆದಿದ್ದು, ಇಲ್ಲಿಯವರೆಗೂ ಈ ಕಾನೂನಿನ ನಿಯಮ ಉಲ್ಲಂಘಿಸಿದ 35 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವ ಏಕೈಕ ಉದ್ದೇಶ ಅಥವಾ ಒತ್ತಾಯ ಪೂರ್ವಕವಾಗಿ, ವಂಚಿಸಿ ಧಾರ್ಮಿಕ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ಈ ಸುಗ್ರೀವಾಜ್ಞೆ ಹೊರಡಿಸಿತ್ತು. ಇದರಲ್ಲಿರುವ ನಿಯಮಗಳನ್ನು ಉಲ್ಲಂಘಿಸುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸುವ ಅವಕಾಶವಿದೆ. ಮದುವೆಯಾಗುವ ಉದ್ದೇಶದಿಂದಷ್ಟೇ ಮತಾಂತರ ಮಾಡಿದರೆ, ಅಂಥ ಮದುವೆ ಊರ್ಜಿತವಲ್ಲ ಎಂದು ಘೋಷಿಸುವ ಅಧಿಕಾರವೂ ಕಾನೂನಿನಡಿ ಇದೆ.