ಫಾಸ್ಟಾಗ್ ವಾಲೆಟ್ನಲ್ಲಿ ಹಣವಿದ್ದರೂ ಟೋಲ್ ಪ್ಲಾಜಾದಲ್ಲಿ ಅಕ್ರಮವಾಗಿ ದಂಡ ವಸೂಲಿ ಮಾಡಿದ ಎನ್ಹೆಚ್ಎಐ ಮತ್ತು ಪೇಮೆಂಟ್ಸ್ ಬ್ಯಾಂಕ್ಗೆ ಚಂಡೀಗಢ ಗ್ರಾಹಕ ಆಯೋಗ ದಂಡ ವಿಧಿಸಿದೆ. ವಾಲೆಟ್ನಲ್ಲಿ ನೆಗೆಟಿವ್ ಬ್ಯಾಲೆನ್ಸ್ ಇಲ್ಲದಿದ್ದಾಗ ದಂಡ ವಿಧಿಸುವುದು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದೆ.
ನವದೆಹಲಿ (ನ.2): ಫಾಸ್ಟಾಗ್ (FASTag) ವಾಲೆಟ್ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣವಿದ್ದರೂ ಸಹ ಟೋಲ್ ಪ್ಲಾಜಾದಲ್ಲಿ ಅಕ್ರಮವಾಗಿ ದಂಡ ವಸೂಲಿ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಆನ್ಲೈನ್ ಪೇಮೆಂಟ್ಸ್ ಬ್ಯಾಂಕ್ಗೆ ಚಂಡೀಗಢ ಗ್ರಾಹಕ ಆಯೋಗವು ಬಿಸಿ ಮುಟ್ಟಿಸಿದೆ. ವಾಲೆಟ್ನಲ್ಲಿಬ್ಯಾಲೆನ್ಸ್ ಇರುವಾಗ ದಂಡ ವಿಧಿಸುವುದು 'ಸೇವಾ ನ್ಯೂನತೆ' ಎಂದು ಆದೇಶಿಸಿರುವ ಆಯೋಗವು, ಸಂತ್ರಸ್ತ ವಾಹನ ಚಾಲಕನಿಗೆ ದಂಡದ ಮೊತ್ತ ಹಾಗೂ ಪರಿಹಾರ ಸೇರಿ ಒಟ್ಟು ₹4,100 ಪಾವತಿಸುವಂತೆ ಅಧಿಕೃತ ಆದೇಶ ಹೊರಡಿಸಿದೆ!
ಚಂಡೀಗಢ ಗ್ರಾಹಕ ಆಯೋಗದ ಅಧ್ಯಕ್ಷ ಪವನ್ಜಿತ್ ಸಿಂಗ್ ಹಾಗೂ ಸದಸ್ಯ ಮೋಹನ್ ಶರ್ಮಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಫಾಸ್ಟಾಗ್ ಖಾತೆ ಅಥವಾ ವಾಲೆಟ್ನಲ್ಲಿ ನೆಗೆಟಿವ್ ಬ್ಯಾಲೆನ್ಸ್ ಇಲ್ಲದಿರುವವರೆಗೂ ವಾಹನಗಳನ್ನು ಟೋಲ್ ಪ್ಲಾಜಾಗಳಲ್ಲಿ ತಡೆಯಿಲ್ಲದೆ ಸಂಚರಿಸಲು ಅನುಮತಿಸಬೇಕು ಎನ್ನುವ ಎನ್ಹೆಚ್ಎಐ ಸ್ವತಃ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಈ ದಂಡ ವಸೂಲಿ ಮಾಡಲಾಗಿದೆ ಎಂದು ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಆಗಸ್ಟ್ 22 ರಂದು ಹೊರಡಿಸಲಾದ ಈ ಆದೇಶದಲ್ಲಿ, 2021 ರ ಫೆಬ್ರವರಿ 11 ರಂದು ಎನ್ಹೆಚ್ಎಐ ಹೊರಡಿಸಿದ್ದ ಅಧಿಕೃತ ಸುತ್ತೋಲೆಯನ್ನು ಆಯೋಗವು ಉಲ್ಲೇಖಿಸಿದೆ. ಫಾಸ್ಟಾಗ್ ಖಾತೆಯಲ್ಲಿ ಶೂನ್ಯಕ್ಕಿಂತ ಹೆಚ್ಚು (Non-negative) ಹಣವಿದ್ದರೆ ಅಂತಹ ವಾಹನಗಳನ್ನು ಟೋಲ್ನಲ್ಲಿ ಸುಗಮವಾಗಿ ಹೋಗಲು ಬಿಡಬೇಕು ಎಂದು ಈ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ವಾಲೆಟ್ನಲ್ಲಿ ₹210 ಇದ್ದರೂ ₹100 ದಂಡ!
ದೂರುದಾರ ವಾಹನ ಚಾಲಕ ಜೂನ್ 17, 2022 ರಂದು ಚಂಡೀಗಢದಿಂದ ಜಲಂಧರ್ಗೆ ಪ್ರಯಾಣಿಸುತ್ತಿದ್ದಾಗ 'ಬೆಹ್ರಾಮ್ ಟೋಲ್ ಪ್ಲಾಜಾ'ದಲ್ಲಿ (Behram Toll Plaza) ಈ ಘಟನೆ ನಡೆದಿತ್ತು. ಈ ವೇಳೆ ಅವರ ಫಾಸ್ಟಾಗ್ ವಾಲೆಟ್ನಲ್ಲಿ ಹಣವಿಲ್ಲ ಎಂದು ಫಾಸ್ಟಾಗ್ ಸಿಸ್ಟಮ್ ತೋರಿಸಿತ್ತು. ಇದರಿಂದಾಗಿ ಟೋಲ್ ಶುಲ್ಕದ ಜೊತೆಗೆ ₹100 ದಂಡವನ್ನು ಒಳಗೊಂಡಂತೆ ಒಟ್ಟು ₹200 ಮೊತ್ತವನ್ನು ಚಾಲಕನಿಂದ ಪಾವತಿಸಿಕೊಳ್ಳಲಾಗಿತ್ತು.
ಆದರೆ, ಘಟನೆಯ ಸಮಯದಲ್ಲಿ ತಮ್ಮ ಫಾಸ್ಟಾಗ್ ವಾಲೆಟ್ನಲ್ಲಿ ₹210 ಬ್ಯಾಲೆನ್ಸ್ ಇತ್ತು ಎಂದು ಆಧಾರಸಹಿತ ಸಾಬೀತುಪಡಿಸಿದ ಚಾಲಕ, 2021 ರ ಫೆಬ್ರವರಿ ಸುತ್ತೋಲೆಯಂತೆ ಈ ದಂಡ ಅಕ್ರಮ ಎಂದರು. ಬಳಿಕ ದಂಡದ ₹100 ಮರುಪಾವತಿ, ತಮಗಾದ ಮಾನಸಿಕ ಕಿರುಕುಳಕ್ಕೆ ಪರಿಹಾರ ಹಾಗೂ ನ್ಯಾಯಾಲಯದ ವೆಚ್ಚವನ್ನು ಕೋರಿ ಗ್ರಾಹಕ ಆಯೋಗದ ಬಾಗಿಲು ತಟ್ಟಿದ್ದರು. ಪ್ರಕರಣದ ವಿಚಾರಣೆ ವೇಳೆ ಎನ್ಹೆಚ್ಎಐ ಆಯೋಗದ ಮುಂದೆ ಹಾಜರಾಗದ ಕಾರಣ, ಪ್ರಾಧಿಕಾರದ ಅನುಪಸ್ಥಿತಿಯಲ್ಲೇ (Ex-parte) ವಿಚಾರಣೆ ಮುಂದುವರಿಯಿತು. ಇತ್ತ, ಸಂಬಂಧಪಟ್ಟ ಆನ್ಲೈನ್ ಪೇಮೆಂಟ್ಸ್ ಬ್ಯಾಂಕ್, ಫಾಸ್ಟಾಗ್ ಖಾತೆಯಲ್ಲಿ ಕನಿಷ್ಠ ₹150 ಸೆಕ್ಯುರಿಟಿ ಠೇವಣಿ ಇಡಬೇಕಾಗಿದ್ದು, ಅದನ್ನು ಟೋಲ್ ಪಾವತಿಗೆ ಬಳಸಲಾಗುವುದಿಲ್ಲ ಎಂದು ವಾದಿಸಿತು.
ಬ್ಯಾಂಕ್ ವಾದ ತಳ್ಳಿಹಾಕಿದ ಗ್ರಾಹಕ ಆಯೋಗ
ಪೇಮೆಂಟ್ಸ್ ಬ್ಯಾಂಕ್ ವಾದವನ್ನು ಬಲವಾಗಿ ತಳ್ಳಿಹಾಕಿದ ಗ್ರಾಹಕ ಆಯೋಗವು, ಫಾಸ್ಟಾಗ್ ಖಾತೆ ಒದಗಿಸುವ ಮತ್ತು ನಿರ್ವಹಿಸುವ ಸೇವಾ ಪೂರೈಕೆದಾರರಾಗಿ ಬ್ಯಾಂಕ್ ಎನ್ಹೆಚ್ಎಐ ನಿಯಮಗಳಿಗೆ ಅನುಗುಣವಾಗಿ ನಡೆಯಬೇಕು ಹಾಗೂ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದೆ. ಕೇವಲ ₹150 ರ ಕನಿಷ್ಠ ಸೆಕ್ಯುರಿಟಿ ಬ್ಯಾಲೆನ್ಸ್ ನಿಯಮವನ್ನು ಮುನ್ನೆಲೆಗೆ ತಂದು, ಗ್ರಾಹಕರಿಗೆ ಅನಗತ್ಯವಾಗಿ ದಂಡ ವಿಧಿಸುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದರ ಜೊತೆಗೆ, ದೂರು ನೀಡಲು ನಿಗದಿಪಡಿಸಿದ್ದ 'ಚಾರ್ಜ್ಬ್ಯಾಕ್' (Chargeback) ಕಾಲಮಿತಿ ಮುಗಿದುಹೋಗಿದೆ ಎಂಬ ಬ್ಯಾಂಕ್ನ ಮತ್ತೊಂದು ವಾದವನ್ನೂ ಆಯೋಗ ತಳ್ಳಿಹಾಕಿದೆ. ತಪ್ಪು ಟೋಲ್ ಕಡಿತವಾದಾಗ ಬ್ಯಾಂಕ್ಗೆ ದೂರು ನೀಡಿ ಹಣ ಮರಳಿ ಪಡೆಯುವ ಪ್ರಕ್ರಿಯೆಯನ್ನು ಚಾರ್ಜ್ಬ್ಯಾಕ್ ಎನ್ನಲಾಗುತ್ತದೆ. ಆದರೆ, ನಿಯಮಿತ ಸಮಯ ಮೀರಿದೆ ಎನ್ನುವ ಕಾರಣಕ್ಕೆ ಸೇವಾ ನ್ಯೂನತೆಯಿಂದ ಉಂಟಾದ ಹೊಣೆಗಾರಿಕೆಯಿಂದ ಬ್ಯಾಂಕ್ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
₹4,100 ಪರಿಹಾರ ಆದೇಶ – ವಾಹನ ಸವಾರರಿಗೆ ಪ್ರಮುಖ ಪಾಠ:
ಎನ್ಹೆಚ್ಎಐ ಮತ್ತು ಪೇಮೆಂಟ್ಸ್ ಬ್ಯಾಂಕ್ನಿಂದ ಸೇವಾ ನ್ಯೂನತೆಯಾಗಿದೆ ಎಂದು ತೀರ್ಪು ನೀಡಿರುವ ಆಯೋಗವು, ಅಕ್ರಮವಾಗಿ ವಸೂಲಿ ಮಾಡಿದ್ದ ₹100 ದಂಡದ ಮೊತ್ತವನ್ನು ವಾಪಸ್ ನೀಡಲು ಹಾಗೂ ಚಾಲಕನಿಗಾದ ಮಾನಸಿಕ ಕಿರುಕುಳಕ್ಕೆ ₹4,000 ಪರಿಹಾರವನ್ನು ಒಟ್ಟಾಗಿ ಪಾವತಿಸಲು (ಒಟ್ಟು ₹4,100) ಆದೇಶಿಸಿದೆ.
ಈ ಮಹತ್ವದ ತೀರ್ಪು ಟೋಲ್ ಪ್ಲಾಜಾಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಫೆಬ್ರವರಿ 11, 2021 ರ NHAI ಸುತ್ತೋಲೆಯನ್ನು ಪುನರುಚ್ಚರಿಸಿದೆ. ಒಂದು ವೇಳೆ ನಿಮಗೂ ಇಂತಹ ಅನ್ಯಾಯದ ಅಥವಾ ತಪ್ಪು ಟೋಲ್ ಕಡಿತ ಎದುರಾದರೆ, ನಿಮ್ಮ ಫಾಸ್ಟಾಗ್ ವಾಲೆಟ್ ಬ್ಯಾಲೆನ್ಸ್ ವಿವರ, ವಹಿವಾಟಿನ ರಸೀದಿ ಹಾಗೂ ಟೋಲ್ ಸ್ಲಿಪ್ಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದು ಕಾನೂನು ಹೋರಾಟಕ್ಕೆ ಸಹಕಾರಿಯಾಗಲಿದೆ.





