ನವದೆಹಲಿ(ಫೆ.15): ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾ ಮೂಲಕ ಹಾದು ಹೋಗುವ ವಾಹನಗಳಿಗೆ ಎಲೆಕ್ಟ್ರಾನಿಕ್‌ ರೂಪದಲ್ಲಿ ಸುಂಕ ಪಾವತಿಸುವ ‘ಫಾಸ್ಟ್ಯಾಗ್‌’ ಸೋಮವಾರ ಮಧ್ಯರಾತ್ರಿಯಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಫಾಸ್ಟ್ಯಾಗ್‌ ಇಲ್ಲದ ವಾಹನಗಳಿಗೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಭಾನುವಾರ ತಿಳಿಸಿದೆ.

ಫೆ.15- 16ರ ಮಧ್ಯರಾತ್ರಿಯಿಂದ ಟೋಲ್‌ ಪ್ಲಾಜಾಗಳಲ್ಲಿರುವ ಎಲ್ಲ ಲೇನುಗಳನ್ನು ಫಾಸ್ಟ್ಯಾಗ್‌ ಲೇನ್‌ ಎಂದು ಘೋಷಿಸಲಾಗುತ್ತದೆ. 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ, ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಫಾಸ್ಟ್ಯಾಗ್‌ ಲೇನ್‌ ಪ್ರವೇಶಿಸಿದರೆ ದುಪ್ಪಟ್ಟು ಸುಂಕವನ್ನು ವಸೂಲು ಮಾಡಲಾಗುತ್ತದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ. ಟೋಲ್‌ ನಾಕಾಗಳಲ್ಲಿ ದಟ್ಟಣೆ ತಪ್ಪಿಸಿ ಡಿಜಿಟಲ್‌ ಪೇಮೆಂಟ್‌ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

2016ರಲ್ಲಿ ಮೊದಲ ಬಾರಿ ಫಾಸ್ಟ್ಯಾಗ್‌ ಸೌಲಭ್ಯ ಜಾರಿಗೆ ಬಂದಿತ್ತು. 2021ರ ಜನವರಿ 1ರಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಬಳಿಕ ಅದನ್ನು ಫೆ.15ಕ್ಕೆ ವಿಸ್ತರಿಸಿತ್ತು. ಸ್ಥಳದಲ್ಲೇ ಫಾಸ್ಟ್ಯಾಗ್‌ ಖರೀದಿಗೆ ಅನುಕೂಲ ಕಲ್ಪಿಸಲು 40 ಸಾವಿರ ಕೇಂದ್ರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರೆದಿದೆ.

ಮತ್ತೊಮ್ಮೆ ಗಡುವು ವಿಸ್ತರಣೆ ಇಲ್ಲ: ಗಡ್ಕರಿ

‘ಫಾಸ್ಟ್ಯಾಗ್‌ ಕಡ್ಡಾಯ ಗಡುವನ್ನು ಈಗಾಗಲೇ ಎರಡು- ಮೂರು ಬಾರಿ ವಿಸ್ತರಿಸಲಾಗಿದೆ. ಅದನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗುವುದಿಲ್ಲ. ಹೀಗಾಗಿ ವಾಹನ ಮಾಲೀಕರು ತಕ್ಷಣವೇ ಫಾಸ್ಟ್ಯಾಗ್‌ ಸೌಲಭ್ಯ ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ತಿಳಿಸಿದ್ದಾರೆ. ‘ಕೆಲವೊಂದು ಮಾರ್ಗಗಳಲ್ಲಿ ಶೇ.90ರಷ್ಟುಫಾಸ್ಟ್ಯಾಗ್‌ ನೋಂದಣಿಯಾಗಿದೆ. ಶೇ.10ರಷ್ಟುಮಂದಿ ಮಾತ್ರ ನೋಂದಣಿ ಮಾಡಿಸಿಕೊಂಡಿಲ್ಲ. ಟೋಲ್‌ ನಾಕಾಗಳಲ್ಲಿ ಫಾಸ್ಟ್ಯಾಗ್‌ ಲಭ್ಯವಿದ್ದು, ಜನರು ಅದನ್ನು ಖರೀದಿಸಬೇಕು. ಸುಗಮ ಸಂಚಾರಕ್ಕಾಗಿ ಬಳಸಬೇಕು’ ಎಂದು ಗಡ್ಕರಿ ಮನವಿ ಮಾಡಿದ್ದಾರೆ.