ಫೆ.16ಕ್ಕೆ ಗ್ರಾಮೀಣ ಭಾರತ್ ಬಂದ್‌ಗೆ ಕರೆ, ರೈತ ಪ್ರತಿಭಟನೆಯಿಂದ ಏನಿರುತ್ತೆ? ಏನಿರಲ್ಲ?
ವಿವಿಧ ಬೇಡಿಕೆ ಈಡೇರಿಕೆಗೆ ರೈತರು ನಡೆಸುತ್ತಿರುವ ದಿಲ್ಲಿ ಚಲೋ ಪ್ರತಿಭಟನೆ ತೀವ್ರಗೊಂಡಿದೆ. ದಹೆಲಿ ಗಡಿಯಲ್ಲಿ ರೈತರನ್ನು ತಡೆದಿರುವ ಕಾರಣ ಆಕ್ರೋಶಕೊಂಡಿರುವ ರೈತರು ಇದೀಗ ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಗ್ರಾಮೀಣ ಭಾರತ್ ಬಂದ್‌ನಿಂದ ಯಾವೆಲ್ಲಾ ಸೇವೆಗಳು ಬಂದ್ ಆಗಲಿದೆ?
ನವದೆಹಲಿ(ಫೆ.14) ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ದಿಲ್ಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರೈತರು ಹಾಗೂ ಪೊಲೀಸರ ನಡುವಿನ ಗುದ್ದಾಟ ತೀವ್ರಗೊಳ್ಳುತ್ತಿದೆ. ರೈತರು ದೆಹಲಿ ಪ್ರವೇಶಿಸದಂತೆ ರಸ್ತೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ರೈತರು ಈ ತಡೆಗೋಡೆಗಳನ್ನು ಮುರಿದು ಮುನ್ನಗ್ಗುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಆಶ್ರುವಾಯು, ಜಲಫಿರಂಗಿ ಸೇರಿದಂತೆ ಹಲವು ಅಸ್ತ್ರಗಳನ್ನು ಪೊಲೀಸರು ಪ್ರಯೋಗಿಸಿದ್ದಾರೆ. ಇದೀಗ ತಮ್ಮ ಹೋರಾಟವನ್ನು ನಿರೀಕ್ಷಿತ ಮಟ್ಟದಲ್ಲಿ ಕೊಂಡೊಯ್ಯಲು ಸಾಧ್ಯವಾಗದಿರುವ ಕಾರಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತ ಸಂಘಟನೆಗಳು ಫೆಬ್ರವರಿ 16ಕ್ಕೆ ಗ್ರಾಮೀಣ ಭಾರತ ಬಂದ್‌ಗೆ ಕರೆ ಕೊಟ್ಟಿದೆ.
ಫೆ.16ರ ಶುಕ್ರವಾರ ಮುಂಜಾನೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಈ ವೇಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಪಂಜಾಬ್‌ನಲ್ಲಿ ಪ್ರತಿಭಟನೆಯ ಸಮಯದಲ್ಲಿ ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.
6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!
ಈ ಬಗ್ಗೆ ಮಾತನಾಡಿದ ಎಸ್‌ಕೆಎಮ್ ರಾಷ್ಟ್ರೀಯ ಸಮನ್ವಯ ಸಮಿತಿ ಸದಸ್ಯ ಡಾ. ದರ್ಶನ್ ಪಾಲ್ ‘ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಯೋಜಿಸಲಾಗಿತ್ತು. ಬಂದ್ ವೇಳೆ ಗ್ರಾಮಗಳ ಜನರು ತಮ್ಮೆಲ್ಲ ಕೃಷಿ ಚಟುವಟಿಕೆಗಳು ಹಾಗೂ ನರೇಗಾ ಗ್ರಾಮೀಣ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಅಂಬುಲೆನ್ಸ್, ಸಾವು, ಮದುವೆ, ಮೆಡಿಕಲ್ ಶಾಪ್‌ಗಳು, ಸುದ್ದಿ ಪತ್ರಿಕೆ ವಿತರಣೆ, ಪರೀಕ್ಷೆ, ಪ್ರಯಾಣಿಕರು ಹಾಗೂ ಏರ್‌ಪೋರ್ಟ್ ಸೇರಿದಂತೆ ಇತರ ತುರ್ತು ಅವಶ್ಯಕಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ’ ಎಂದಿದ್ದಾರೆ.
ಅಲ್ಲದೇ ‘ಬಂದ್ ದಿನದಂದು ತರಕಾರಿಗಳು ಮತ್ತು ಇತರ ಬೆಳೆಗಳ ಮಾರಾಟ, ಗ್ರಾಮೀಣ ಅಂಗಡಿಗಳು, ಧಾನ್ಯ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು ಗ್ರಾಮೀಣ ಕೈಗಾರಿಕೆಗಳನ್ನು ಬಂದ್ ಮಾಡುವಂತೆ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ.
ಇದು ಪ್ರೊಟೆಸ್ಟೋ? ಯುದ್ಧವೋ? ರೈತ ಪ್ರತಿಭಟನೆ ಟೂಲ್ ಕಿಟ್ ಬಯಲು ಮಾಡಿದ ನೆಟಿಜನ್ಸ್!
ಗ್ರಾಮೀಣ ಭಾರತ್ ಬಂದ್‌ನಲ್ಲಿ ಪ್ರಮುಖವಾಗಿ ಕೃಷಿ ಚಟುವಟಿಕೆಗಳು, ಕೃಷಿ ಉತ್ಪನ್ನಗಳು, ತರಕಾರಿ, ಆಹಾರ ಧಾನ್ಯ, ಹಣ್ಣು ಸೇರಿದಂತೆ ಬೇಳೆ ಕಾಳುಗಳು ಮಾರುಕಟ್ಟೆಗಳು, ವಿತರಣೆ,ಸಾಗಾಣೆ ಬಂದ್ ಆಗಲಿದೆ. ಹೆದ್ದಾರಿಗಳನ್ನು ಬಂದ್ ಮಾಡಲಿರುವ ಕಾರಣ ಸಂಚಾರಕ್ಕೂ ಅಡ್ಡಿಯಾಗಲಿದೆ.