ದೆಹಲಿಯಲ್ಲಿ ಇಂದಿನಿಂದ ರೈತರ ಪ್ರತಿಭಟನೆ: 1 ತಿಂಗಳ ಕಾಲ ಸೆಕ್ಷನ್ 144 ಜಾರಿ, ಮೆರವಣಿಗೆ, ರಾಲಿಗೆ ನಿಷೇಧ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರ್ಯಾಣ ರೈತರು ಫೆ.13ರ ಮಂಗಳವಾರ ದೆಹಲಿ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹೋರಾಟದಲ್ಲಿ 200 ರೈತ ಸಂಘಟನೆಗಳ 25000ಕ್ಕೂ ಹೆಚ್ಚು ರೈತರು ಭಾಗಿಯಾಗುವ ನಿರೀಕ್ಷೆ ಇದೆ.
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರ್ಯಾಣ ರೈತರು ಫೆ.13ರ ಮಂಗಳವಾರ ದೆಹಲಿ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹೋರಾಟದಲ್ಲಿ 200 ರೈತ ಸಂಘಟನೆಗಳ 25000ಕ್ಕೂ ಹೆಚ್ಚು ರೈತರು ಭಾಗಿಯಾಗುವ ನಿರೀಕ್ಷೆ ಇದೆ.
ಯಾವುದೇ ಅಹಿತಕರ ಘಟನೆ ತಡೆಯಲು ರಾಷ್ಟ್ರ ರಾಜಧಾನಿಯಾದ್ಯಂತ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನು ನಿರ್ಬಂಧ, ಟ್ರಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ನಗರ ಪ್ರವೇಶಗಳನ್ನು ನಿರ್ಬಂಧಿಸಲಾಗಿದೆ. ಈ ಕ್ರಮಗಳು ಫೆ.12ರಿಂದ ಮಾ.12ರವರೆಗೆ ಜಾರಿಯಲ್ಲಿರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಡಿಯಲ್ಲಿ ಕಟ್ಟೆಚ್ಚರ: ರೈತರ ರಾಜಧಾನಿ ಪ್ರವೇಶ ತಡೆಯಲು ದೆಹಲಿಯ ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನಾಕಾರರ ತಡೆಯಲು ರಸ್ತೆಯಲ್ಲಿ ಸಿಮೆಂಟ್ ತಡೆಗೋಡೆ, ಬಹುಪದರ ಬ್ಯಾರಿಕೇಡ್ ಗಳು, ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ 11 ಪ್ಯಾರಾಮಿಲಿಟರಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. 5000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ನವದೆಹಲಿ: ದೆಹಲಿ ಚಲೋ ಕೈಬಿಡುವ ಸಂಬಂಧ ರೈತ ಪ್ರತಿನಿಧಿಗಳ ಜೊತೆ ಕೇಂದ್ರದ ಮೂವರು ಸಚಿವರ ತಂಡ ಚಂಡೀಗಢದಲ್ಲಿ ಸೋಮವಾರ ಸಂಜೆ ಸಂಧಾನ ಮಾತುಕತೆ ನಡೆಸಿದ್ದು, ಈ ಮಾತುಕತೆ ವಿಫಲವಾದ ಕಾರಣ ದೆಹಲಿ ಚಲೋಗೆ ರೈತರು ಮುಂದಾಗಿದ್ದಾರೆ. ಈ ವೇಳೆ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆಯ ಸಮಯದಲ್ಲಿ ರೈತರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳ ರದ್ದು, ಪ್ರತಿಭಟನೆ ವೇಳೆ ಮಡಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
ಆದರೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರು, ಕೃಷಿ ಕಾರ್ಮಿಕರಿಗೆ ಪಿಂಚಣಿ, ರೈತರ ಸಾಲ ಮನ್ನಾ, ಲಖೀಂಪುರ ಖೇರಿ ಕೇಸಲ್ಲಿ ರೈತರ ಮೇಲೆ ದಾಖಲಿಸಿದ ಕೇಸು ರದ್ದು, 2013ರ ಭೂಸ್ವಾಧೀನ ಕಾಯ್ದೆರದ್ದು, ವಿಶ್ವ ವಾಣಿಜ್ಯ ಸಂಘಟನೆಯಿಂದ ಹೊರಬರುವುದು, ಕೃಷಿ ಕಾಯ್ದೆ ರದ್ದು ವಿಷಯದಲ್ಲಿ ರೈತರು ಮತ್ತು ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ.