* 15 ತಿಂಗಳ ರೈತ ಹೋರಾಟ ಅಂತ್ಯ, ಪ್ರತಿಭಟನೆ ನಿಲ್ಲಿಸಲು ರೈತರ ನಿರ್ಧಾರ* ಬೇಡಿಕೆ ಈಡೇರಿಕೆ ಪರಿಶೀಲನೆಗೆ ಜ.15ಕ್ಕೆ ಸಭೆ*  ಹಾಗಾದರೆ ಕೇಂದ್ರ ಈಡೇರಿಸಿದ ಬೇಡಿಕೆಗಳು ಏನು?* ಕೃಷಿ ಮಸೂದೆ ತಿದ್ದುಪಡಿಯನ್ನು ಕೇಂದ್ರ ಹಿಂಪಡೆದಿತ್ತು

ನವದೆಹಲಿ(ಡಿ. 10) ಮೂರು ಕೃಷಿ ಕಾಯ್ದೆ(Farms Bill) ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 15 ತಿಂಗಳಿನಿಂದ ನಡೆಯುತ್ತಿದ್ದ ಬೃಹತ್‌ ಹೋರಾಟ (Protest) ನಿಲ್ಲಿಸಲು ರೈತ ಸಂಘಟನೆಗಳು ಗುರುವಾರ ನಿರ್ಧರಿಸಿವೆ. ಇತ್ತೀಚೆಗೆ ಮೂರು ಕೃಷಿ ಕಾಯ್ದೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ(Union Govt) ರೈತರ ಬಾಕಿ ಬೇಡಿಕೆ ಈಡೇರಿಸುವ ಕುರಿತೂ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಪ್ರತಿಭಟನೆಯ ಕೇಂದ್ರ ಸ್ಥಳವಾದ ದೆಹಲಿ(NewDelhi) ಗಡಿಯನ್ನು ಡಿ.11ಕ್ಕೆ ತೆರವುಗೊಳಿಸಿ ಪ್ರತಿಭಟನೆ ನಿಲ್ಲಿಸುವುದಾಗಿ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಪ್ರಕಟಿಸಿದೆ.

ಆದರೆ ಈ ಘೋಷಣೆ ಬೆನ್ನಲ್ಲೇ, ‘ಇದು ಹೋರಾಟದ ಮುಕ್ತಾಯವಲ್ಲ, ನಾವು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆಯೇ ಎಂಬುದನ್ನು ಖಚಿತಪಡಿಸಲು ಜ.15ರಂದು ಮತ್ತೆ ಸಭೆ ಸೇರಲಿದ್ದೇವೆ. ಬೇಡಿಕೆ ಈಡೇರದೇ ಇದ್ದಲ್ಲಿ ಮತ್ತೆ ಹೋರಾಟ ಆರಂಭಿಸಲಿದ್ದೇವೆ’ ಎಂದು ಎಸ್‌ಕೆಎಂನ ಬಲಬೀರ್‌ ಸಿಂಗ್‌ ರಾಜೇವಾಲ್‌ ಹೇಳಿದ್ದಾರೆ.

ಪ್ರತಿಭಟನೆ ವೇಳೆ ಮೃತ ರೈತರ ಲೆಕ್ಕ ನೀಡಿಲ್ಲ, ಪರಿಹಾರ ಇಲ್ಲ

ಪಂಚರಾಜ್ಯಗಳ ಚುನಾವಣೆಗೂ ಮುನ್ನ ನಡೆದ ಈ ಬೆಳವಣಿಗೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಮತ್ತೊಂದೆಡೆ, ಬಿಕ್ಕಟ್ಟು ಇತ್ಯರ್ಥಕ್ಕೆ ಇತ್ತೀಚೆಗೆ ಅಖಾಡಕ್ಕೆ ಇಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಯತ್ನ ಫಲ ಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.

ಕೇಂದ್ರ ಸರ್ಕಾರದ ಭರವಸೆ: 
ಅತ್ಯಂತ ಸುದೀರ್ಘ ಅವಧಿಗೆ ನಡೆದ ರೈತರ ಹೋರಾಟವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ, ಮೂರೂ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿ, ಅದನ್ನು ಸಂಸತ್ತಿನ ಉಭಯ ಸದನಗಳಲ್ಲೂ ಒಂದೇ ದಿನದಲ್ಲೀ ಅಂಗೀಕರಿಸಿತ್ತು. ಆದರೆ, ರೈತರು ಮಾತ್ರ ತಮ್ಮ ಬಾಕಿ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ರೈತರ ಬಾಕಿ ಬೇಡಿಕೆ ಈಡೇರಿಸುವ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ 5 ರೈತ ಪ್ರತಿನಿಧಿಗಳ ನಿಯೋಗಕ್ಕೆ ಆಹ್ವಾನ ನೀಡಿತ್ತು. ಅದರಂತೆ 5 ಸದಸ್ಯರನ್ನು ಒಳಗೊಂಡ ರೈತ ಸಮಿತಿಯು ಇತ್ತೀಚೆಗೆ ಕೇಂದ್ರದ ಜೊತೆ ಸಮಾಲೋಚನೆ ನಡೆಸಿತ್ತು. ಅದರ ಬೆನ್ನಲ್ಲೇ ಬುಧವಾರ ಸರ್ಕಾರವು ರೈತರ ಸಮಿತಿಗೆ ಬಾಕಿ ಬೇಡಿಕೆ ಈಡೇರಿಸುವ ಕುರಿತ ತನ್ನ ಕರಡು ಪ್ರಸ್ತಾವಗಳನ್ನು ರವಾನಿಸಿತ್ತು. ಅದರಲ್ಲಿ ಕನಿಷ್ಠ ಬೆಂಬಲ ಬೆಲೆ ವಿಷಯ ನಿರ್ಧರಿಸಲು ಸಮಿತಿ ರಚನೆ, ರೈತರ ವಿರುದ್ಧ ದಾಖಲಾದ ಎಲ್ಲಾ ಕೇಸು ಹಿಂಪಡೆಯುವುದು, ಕೃಷಿ ಹೋರಾಟದ ವೇಳೆ ಮಡಿದ ರೈತರಿಗೆ ಪರಿಹಾರ, ಪಂಜಾಬ್‌ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದಕ್ಕಾಗಿ ದಾಖಲಿಸಿದ ಕೇಸ್‌ ವಾಪಸ್‌, ರೈತರ ಉಚಿತ ಪಂಪ್‌ ಸೆಟ್‌ಗಳಿಗೂ ಬಿಲ್‌ ನೀಡುವ ವಿದ್ಯುತ್‌ ಮಸೂದೆ ಮಂಡನೆಗೂ ಮುನ್ನ ಎಲ್ಲಾ ಬಾಧ್ಯಸ್ಥರೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದೆ. ಈ ಭರವಸೆಗಳನ್ನು ಒಪ್ಪಿರುವ ರೈತ ಸಂಘಟನೆಗಳು ತಮ್ಮ ಪ್ರತಿಭಟನೆ ಕೈಬಿಡುವ ನಿರ್ಧಾರ ಕೈಗೊಂಡಿವೆ.

ಆದರೆ, ಇನ್ನೊಂದು ಪ್ರಮುಖ ಬೇಡಿಕೆಯಾದ ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾ ಬೇಡಿಕೆ ಬಗ್ಗೆ ಇದರಲ್ಲಿ ಯಾವುದೇ ಚಕಾರವಿಲ್ಲ.

ರೈತರ ಸಂಭ್ರಮಾಚರಣೆ: ತಮ್ಮ ಹೋರಾಟ ಫಲ ಕೊಟ್ಟಹಿನ್ನೆಲೆಯಲ್ಲಿ ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಬೀಡುಬಿಟ್ಟಿದ್ದ ರೈತರು ಗುರುವಾರ ಸಂಜೆ ವಿಜಯ ಪ್ರಾರ್ಥನೆ ನಡೆಸಿದರು. ಜೊತೆಗೆ ಡಿ.11ರಂದು ಬೆಳಗ್ಗೆ ಹೋರಾಟ ಸ್ಥಳದಲ್ಲಿ ವಿಜಯೋತ್ಸವ ರಾರ‍ಯಲಿಗೆ ನಿರ್ಧರಿಸಿದ್ದಾರೆ. ಮತ್ತೊಂದೆಡೆ ಪಂಜಾಬ್‌ನ ರೈತರು ಡಿ.13ರಂದು ಅಮೃತಸರದಲ್ಲಿರುವ ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಹೋರಾಟ ಕೈಬಿಡುವ ರೈತರ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸ್ವಾಗತಿಸಿದ್ದಾರೆ.