ನವದೆಹಲಿ(ಜ.27): ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಕಳೆದ ಎರಡು ತಿಂಗಳಿನಿಂದ ನಡೆಸುತ್ತಿದ್ದ ರೈತ ಪ್ರತಿಭಟನೆಗೆ ಕಾಂಗ್ರೆಸ್, ವಿರೋಧ ಪಕ್ಷಗಳು ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಟ್ರಾಕ್ಟರ್ ರ್ಯಾಲಿ ಗಲಭೆ ಮೂಲಕ ರೈತ ಸಂಘಟನೆಗಳ ಬೆಂಬಲ ಕಡಿಮೆಯಾಗಿದೆ. ರೈತ ಸಂಘಟನೆಗಳೇ ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಈ ಗಲಭೆ ರೈತ ಪ್ರತಿಭಟನೆ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಈ ಘಟನೆ ಬೆನ್ನಲ್ಲೇ ರೈತರು ಕರೆ ನೀಡಿದ್ದ ಸಂಸತ್ ಚಲೋ ರ್ಯಾಲಿಯನ್ನು ರದ್ದು ಮಾಡಿದ್ದಾರೆ.

ದೆಹೆಲಿ ಪೊಲೀಸರಿಂದ ಸುದ್ದಿಗೋಷ್ಠಿ; ಗಲಭೆಗೆ ರೈತ ನಾಯಕರೇ ಹೊಣೆ, ಸ್ಫೋಟಕ ಮಾಹಿತಿ ಬಹಿರಂಗ

ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಇದೇ ದಿನ ಸಂಸತ್ ಚಲೋ ರ್ಯಾಲಿ ಹಮ್ಮಿಕೊಂಡಿದ್ದ ರೈತರು ಇದೀಗ ರ್ಯಾಲಿ ರದ್ದು ಮಾಡಿದ್ದಾರೆ ಎಂದು ಭಾರತೀಯ ಕಿಸಾನ್ ಯುನಿಯನ್ ನಾಯಕ ಬಲ್ಬೀರ್ ಎಸ್ ರಜೆವಾಲ ಖಚಿತಪಡಿಸಿದ್ದಾರೆ. ಸದ್ಯ ರದ್ದು ಮಾಡಿರುವ ರ್ಯಾಲಿಯನ್ನು ಮುಂದೆ ಆಯೋಜಿಸಲಾಗುವುದು. ಈ ಕುರಿತು ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ರಜೆವಾಲ ಹೇಳಿದ್ದಾರೆ.

ರೈತರಿಗೆ ಬೆಂಬಲ ಕಡಿಮೆಯಾಗುತ್ತಿದ್ದಂತೆ ಇದೀಗ ಭಾರತೀಯ ಕಿಸಾನ್ ಯುನಿಯನ್ ದೇಶಾದ್ಯಂತ ಹುತಾತ್ಮರ ದಿನ ಆಚರಿಸಲು ಮುಂದಾಗಿದೆ. ರೈತ ಪ್ರತಿಭಟನೆ ಪರವಾಗಿ ದೇಶಾದ್ಯಂತ ಹುತಾತ್ಮರ ದಿನ ಆಚರಿಸಲು ಕರೆ ನೀಡಲಾಗಿದೆ. ಈ ಕುರಿತು ರಜೆವಾಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ಗಲಭೆ ಕುರಿತು ಬಲ್ಬೀರ್ ರಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಾಕ್ಟರ್ ರ್ಯಾಲಿ ಶೇಕಡಾ 99.9 ರಷ್ಟು ಶಾಂತಿಯುತವಾಗಿತ್ತು. ಕೆಲವರು ಶಾಂತಿಯುತ ರ್ಯಾಲಿ ಭಂಗ ಮಾಡುವ ಯತ್ನ ಮಾಡಿದ್ದಾರೆ. ಗಲಭೆಗೂ ರೈತರ ಟ್ರಾಕ್ಟರ್ ರ್ಯಾಲಿಗೂ ಸಂಬಂಧವಿಲ್ಲ ಎಂದಿದ್ದಾರೆ.