ದೆಹೆಲಿ ಪೊಲೀಸರಿಂದ ಸುದ್ದಿಗೋಷ್ಠಿ; ಗಲಭೆಗೆ ರೈತ ನಾಯಕರೇ ಹೊಣೆ, ಸ್ಫೋಟಕ ಮಾಹಿತಿ ಬಹಿರಂಗ!
ದೆಹಲಿಯಲ್ಲಿ ರೈತರು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಗಲಭೆಯಾಗಿ ಮಾರ್ಪಟ್ಟು ಅಪಾರ ನಷ್ಟ ಸಂಭವಿಸಿದೆ. ಕೆಂಪು ಕೋಟೆಗೆ ಮುತ್ತಿಗೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಲ್ಲದೇ, ಸಿಖ್ ಧ್ವಜ ಹಾರಿಸಿ ದಾಂಧಲೆ ನಡೆಸಿದ್ದಾರೆ. ಈ ಘಟನೆ ಬಳಿಕ ಇದೀಗ ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ರೈತರ ಟ್ರಾಕ್ಟರ್ ರ್ಯಾಲಿ, ಗಲಭೆ ಕುರಿತು ದೆಹಲಿ ಪೊಲೀಸ್ ಕಮೀಷನರ್ ಎನ್ ಎನ್ ಶ್ರೀವಾತ್ಸವ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಉಗ್ರಗಾಮಿಗಳ ಗುಂಪು ರೈತರನ್ನು ಕಾನೂನು ಕೈಗೆ ತೆಗೆದುಕೊಳ್ಳುವಂತೆ ಪ್ರಚೋದಿಸಿ ಎಂದು ಶ್ರೀವಾತ್ಸವ್ ಹೇಳಿದ್ದಾರೆ.
ದೆಹಲಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಹಲವು ಮಹತ್ವದ ವಿಚಾರ ಕುರಿತು ಬೆಳಕು ಚೆಲ್ಲಿದ್ದಾರೆ. ರೈತರೇ ಒಪ್ಪಿಗೆ ಸೂಚಿಸಿದ ಷರತ್ತುಗಳ ಪ್ರಕಾರ ಮಧ್ಯಾಹ್ನ ರೈತರ ಟ್ರಾಕ್ಟರ್ ರ್ಯಾಲಿ ಆರಂಭಗೊಳ್ಳಬೇಕಿತ್ತು. ಸಂಜೆ 5 ಗಂಟೆ ವರೆಗೆ ಸಮಯ ನೀಡಲಾಗಿತ್ತು.
ಜನವರಿ 25ರ ಸಂಜೆ ಕೆಲ ರೈತ ನಾಯಕರು, ಉಗ್ರಗಾಮಿ ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇಷ್ಟೇ ಅಲ್ಲ ಪೊಲೀಸರ ಬ್ಯಾರಿಕೇಡ್ ಮುರಿದು ದೆಹಲಿ ಒಳಪ್ರವೇಶಿಸುವ ಸಂಚು ರೂಪಿಸಿಲಾಗಿದೆ ಎಂದು ದೆಹಲಿ ಪೋಲೀಸರು ಗಲಭೆ ಹಿಂದಿನ ಕರಾಳ ಸತ್ಯ ಬಹಿರಂಗ ಪಡಿಸಿದ್ದಾರೆ
ಮದ್ಯಾಹ್ನ ಆರಂಭಗೊಳ್ಳಬೇಕಿದ್ದ ರ್ಯಾಲಿ ಗಾಝಿಪುರ್, ಟಿಕ್ರಿ ಗಡಿಯಲ್ಲಿ ಬೆಳಗ್ಗೆ 8.30ಕ್ಕೆ ರೈತರು ಟ್ರಾಕ್ಟರ್ ರ್ಯಾಲಿ ಆರಂಭಿಸಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ದೆಹಲಿ ಒಳಪ್ರವೇಶಿಸಲು ರೈತ ಮುಖಂಡರು ಕರೆ ನೀಡಿದ್ದಾರೆ. ಇದು ರೈತರೊಳಗಿನ ಕಿಚ್ಚು ಮತ್ತಷ್ಟು ಹೆಚ್ಚಿಸಿತ್ತು.
ದೆಹಲಿ ಪೊಲೀಸರು ರೈತರ ರ್ಯಾಲಿಯನ್ನು ಶಾಂತಿಯುತವಾಗಿ ಮುಂದುವರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಬ್ಯಾರಿಕೇಡ್ ಮುರಿದ ಟ್ರಾಕ್ಟರ್ ಮೂಲಕ ಒಳ ಪ್ರವೇಶಿಸಿದ ರೈತರು ದಾಂಧಲೆ ಆರಂಭಿಸಿದ್ದಾರೆ.
ಈ ಗಲಭೆಗೆ ರೈತ ಸಂಘಟನೆಗಳು, ರೈತ ಮುಖಂಡರು ಕಾರಣ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕೆಲ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
30 ಪೊಲೀಸ್ ವಾಹನಗಳನ್ನು ಪುಡಿ ಪುಡಿ ಮಾಡಲಾಗಿದೆ. ಸಾರಿಗೆ ವಾಹನಗಳಾದ ಬಸ್ ಸೇರಿದಂತೆ ಹಲವು ವಾಹನಗಳು ಜಖಂ ಗೊಂಡಿದೆ. ರಸ್ತೆ ತಡೆಯಲು ಬಳಸಿದ್ದ 6 ಕಂಟೈನರ್‌ಗಳು ಡ್ಯಾಮೇಜ್ ಆಗಿದೆ. ಉದ್ರಿಕ್ತರ ನಿಯಂತ್ರಿಸಲು ಟಿಯರ್ ಗ್ಯಾಸ್ ಬಳಕೆ ಮಾಡಿದ್ದೇವೆ.
ದೆಹಲಿ ಕೆಂಪು ಕೋಟೆಗೆ ದಾಳಿ ಮಾಡಿದ ರೈತರು, ಕೋಟೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಎಲ್ಲಾ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇನ್ನು ದೇಶದ ಹೆಮ್ಮೆಯ ಪ್ರತೀಕದ ಮೇಲೆ ಧ್ವಜ ಹಾರಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.
ದೆಹಲಿ ಪೊಲೀಸರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವಾಗಿಲ್ಲ. ಯಾಕೆಂದರೆ ರೈತರ ಜೊತೆಗೆ ಮೊದಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಷರತು ವಿಧಿಸಲಾಗಿತ್ತು. ಎಲ್ಲದ್ದಕ್ಕೂ ರೈತರು ಒಪ್ಪಿಗೆ ಸೂಚಿಸಿದ್ದರು.