ನವದೆಹಲಿ(ಡಿ.30): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಕೇಂದ್ರ ಸರ್ಕಾರ ಬುಧವಾರ ಮಾತುಕತೆ ನಡೆಸಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ 40 ರೈತ ಸಂಘಟನೆಗಳ ಮುಖಂಡರ ಜೊತೆ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರ ನೇತೃತ್ವದಲ್ಲಿ ಮಾತುಕತೆ ನಡೆಯಲಿದೆ.

ಈ ಮುನ್ನ ರೈತರ ಜೊತೆ ಐದು ಬಾರಿ ಮಾತುಕತೆಗಳು ಅಪೂರ್ಣಗೊಂಡಿದ್ದರಿಂದ ಬಿಕ್ಕಟ್ಟು ಮುಂದುವರಿದಿದೆ. ಈ ಮಧ್ಯೆ ಸಮಸ್ಯೆ ಪರಿಹಾರಕ್ಕೆ ಇನ್ನೊಂದು ಸುತ್ತಿನ ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ರೈತ ಮುಖಂಡರು ಕೊನೆಗೂ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 25 ದಿನಗಳ ಬಳಿಕ ಮಾತುಕತೆಯನ್ನು ನಿಗದಿ ಮಾಡಲಾಗಿದೆ. ಆದರೆ, ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಕುರಿತಂತೆಯೂ ಚರ್ಚೆ ನಡೆಸಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದು, ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಈ ಮಧ್ಯೆ ಸರ್ಕಾರದ ಜೊತೆ ಮಾತುಕತೆ ನಿಗದಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಗಳು ಬುಧವಾರ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್‌ ರಾರ‍ಯಲಿಗಳನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಿವೆ.

ಅಮಿತ್‌ ಶಾ ಮಾತುಕತೆ:

ಇದೇ ವೇಳೆ ರೈತರ ಜೊತೆಗಿನ ಸಂಧಾನಕ್ಕೂ ಮುನ್ನ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹಾಗೂ ರೈತರ ಜೊತೆ ಸಂಧಾನದಲ್ಲಿ ಭಾಗಿ ಆಗಿರುವ ಸಚಿವ ಪೀಯೂಷ್‌ ಗೋಯಲ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ರೈತರ ಮುಂದೆ ಇಡಬೇಕಾದ ಪ್ರಸ್ತಾವನೆಗಳು ಹಾಗೂ ಕೇಂದ್ರ ಸರ್ಕಾರದ ನಿಲುವಿನ ಕುರಿತಂತೆ ಅಮಿತ್‌ ಶಾ ಅವರಿಂದ ಅಭಿಪ್ರಾಯ ಪಡೆದಿದ್ದಾರೆ.

ಇದೇ ವೇಳೆ ವಿಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿವೆ. ಒಂದು ವೇಳೆ ಮಾತುಕತೆಯ ವೇಳೆ ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದರೆ ವಿಪಕ್ಷಗಳು ಮುಂದಿನ ನಡೆಯ ಕುರಿತಂತೆ ತೀರ್ಮಾನ ಕೈಗೊಳ್ಳಲಿವೆ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಹೇಳಿದ್ದಾರೆ.