ನವದೆಹಲಿ(ಡಿ.16): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಳ್ಳುತ್ತಿದೆ. ತಿದ್ದುಪಡಿಯ ಅಗತ್ಯವಿಲ್ಲ, ಕಾಯ್ದೆ ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದು ರೈತರ ಒತ್ತಾಯವಾಗಿದೆ. ಈ ಕುರಿತು ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆಗಳು ವಿಫಲಗೊಂಡಿದೆ. ಇದರ ನಡುವೆ ರೈತ ಪರ ಹಾಗೂ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. 

ರೈತರೊಂದಿಗೆ ಮೋದಿ ಮಾತುಕತೆ; ಅನ್ನದಾತನ ಹಾದಿತಪ್ಪಿಸುತ್ತಿದೆ ವಿಪಕ್ಷ ಎಂದ ಪ್ರಧಾನಿ!

ರೈತ ಪ್ರತಿಭಟನೆ ಪರ ವಿರೋಧ ಸಲ್ಲಿಕೆಯಾದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ದೆ ನೇತೃತ್ವದ ನ್ಯಾಯಪೀಠ ಸಮಸ್ಯೆಗೆ ಶೀಘ್ರವೇ ಪರಿಹಾರ ಒದಗಿಸಲು ಕೇಂದ್ರಕ್ಕೆ ಸೂಚಿಸಿದೆ. ಇಷ್ಟೇ ಅಲ್ಲ ದೇಶದ ರೈತರ ಸಂಘಟನೆ ಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲು ಸಲಹೆ ನೀಡಿದೆ.

ಸತ್ತು ಹೋಗು ಮೋದಿ; ರೈತ ಪ್ರತಿಭಟನೆಯಲ್ಲಿ ವಿವಾದಾತ್ಮಕ ಘೋಷವಾಕ್ಯ!

ರೈತ ಪ್ರತಿಭಟನೆ ಗಂಭೀರ ವಿಚಾರವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ರೈತರು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬೇಕು. ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸುಪ್ರೀಂ ಹೇಳಿದೆ. ರೈತ ಪ್ರತಿಭಟನೆ ಕುರಿತು ಪಂಜಾಬ್, ದೆಹಲಿ ಹಾಗೂ ಹರ್ಯಾಣ ಸರ್ಕಾರಕ್ಕೆ ನೊಟೀಸ್ ನೀಡಿದೆ.

ರೈತ ಸಂಘಟನೆ ಪ್ರತಿಭಟನೆ ಹಾಗೂ ಕೇಂದ್ರದ ಧೋರಣೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ಪ್ರತಿಭಟನೆ ವಿರುದ್ಧವೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ರೈತರ ಪ್ರತಿಭಟನೆಯಿಂದ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ಎಲ್ಲರೂ ಒಟ್ಟಾಗಿ ಸೇರಿರುವ ಕಾರಣ ಕೊರೋನಾ ಆತಂಕ ಕಾಡುತ್ತಿದೆ ಎಂದು ಪ್ರತಿಭಟನೆ ವಿರುದ್ಧ ಪಿಐಎಲ್ ಸಲ್ಲಿಸಲಾಗಿತ್ತು