7 ಮಕ್ಕಳು, ರೈತ ಸೇರಿ ಸಿಡಿಲು ಬಡಿದು ಒಂದೇ ದಿನ 38 ಜನ ಬಲಿ
ದೇಶದೆಲ್ಲೆಡೆ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು, ಉತ್ತರ ಪ್ರದೇಶ ರಾಜ್ಯದಲ್ಲಿ ಒಂದೇ ದಿನ ಹಲವು ಸಿಡಿಲು ಬಡಿದ ಪ್ರಕರಣಗಳಲ್ಲಿ ಒಟ್ಟು 38 ಜನ ಮೃತಪಟ್ಟಿದ್ದಾರೆ
ಸಿಡಿಲು ಬಡಿದು ಒಂದೇ ದಿನ 38 ಜನ ಸಾವಿಗೀಡಾದ ಆಘಾತಕಾರಿ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು, ಉತ್ತರ ಪ್ರದೇಶ ರಾಜ್ಯದಲ್ಲಿ ಒಂದೇ ದಿನ ಹಲವು ಸಿಡಿಲು ಬಡಿದ ಪ್ರಕರಣಗಳಲ್ಲಿ ಒಟ್ಟು 38 ಜನ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ನಿನ್ನೆ ಒಂದೇ ದಿನ ಸಿಡಿಲಿನಿಂದಾಗಿ ಇಷ್ಟೊಂದು ಸಾವು ಸಂಭವಿಸಿದೆ. ಅದರಲ್ಲೂ ಪ್ರತಾಪ್‌ಗಡ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 11 ಜನ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಸುಲ್ತಾನ್‌ಪುರ ಜಿಲ್ಲೆ ಇದ್ದು, ಇಲ್ಲಿ 7 ಜನ ಸಿಡಿಲಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಈಗಾಗಲೇ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಗುಡುಗು ಮಿಂಚು ಸಿಡಿಲು ಕೂಡ ತೀವ್ರವಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಛಂದೌಲಿ ಜಿಲ್ಲೆಯಲ್ಲಿ 6 ಜನ ಮೃತಪಟ್ಟಿದ್ದರೆ ಮೈನ್‌ಪುರಿಯಲ್ಲಿ 5 ಜನ ಹಾಗೂ ಪ್ರಯಾಗ್‌ರಾಜ್‌ನಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಔರೈಯಾ, ದಿಯೋರಿಯಾ, ಹಾಥ್ರಸ್, ವಾರಣಾಸಿ ಹಾಗೂ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಈ ಸಿಡಿಲಿನ ರೌದ್ರಾವತಾರಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಈ ಜಿಲ್ಲೆಗಳಲ್ಲಿ ಡಜನ್‌ಗೂ ಹೆಚ್ಚು ಜನರಿಗೆ ಸಿಡಿಲಿನಿಂದಾಗಿ ಸುಟ್ಟಗಾಯಗಳಾಗಿವೆ.
ಕರ್ನಾಟಕದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಸಿಡಿಲಿಗೆ ಬಾಲಕಿ ಸಾವು
ಪ್ರತಾಪ್‌ಗಡದಲ್ಲಿ ಜಿಲ್ಲೆಯ ಐದು ಬೇರೆ ಬೇರೆ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಡಿಲಿಗೆ ಬಲಿಯಾದವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗೆಯೇ ಪಶ್ಚಿಮ ಉತ್ತರ ಪ್ರದೇಶ ಛಂದೌಲಿಯಲ್ಲಿ ಅನೇಕರು ಸಿಡಿಲಿನಿಂದ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ನಿನ್ನೆ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆಯಾಗಿತ್ತು. ಮೃತರಲ್ಲಿ 13 ಹಾಗೂ 14 ವರ್ಷ ಪ್ರಾಯದ ಮಕ್ಕಳು ಕೂಡ ಇದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾಗೂ ಮೀನು ಹಿಡಿಯುತ್ತಿರುವಾಗ ಈ ಮಕ್ಕಳು ಸಿಡಿಲಿಗೆ ಬಲಿಯಾಗಿದ್ದಾರೆ.
ಹಾಗೆಯೇ ಸುಲ್ತಾನ್‌ಪುರದಲ್ಲಿ ಸಿಡಿಲಿಗೆ ಬಲಿಯಾದರಲ್ಲಿ ಮೂವರು ಮಕ್ಕಳು ಕೂಡ ಸೇರಿದ್ದಾರೆ. ಹೊಲದಲ್ಲಿ ಭತ್ತದ ನಾಟಿ ಮಾಡುತ್ತಿದ್ದಾಗ ಹಾಗೂ ಬಿದ್ದಿದ್ದ ಮಾವಿನ ಹಣ್ಣು ಹೆಕ್ಕಲು ಹೋಗಿದ್ದಾಗ, ಹಾಗೂ ಮರದ ಕೆಳಗೆ ಆಶ್ರಯ ಪಡೆಯಲು ಹೋಗಿದ್ದಾಗ ಈ ಘಟನೆಗಳು ನಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಯಿಗೆ ಎಳನೀರು ತರಲು ಹೋಗಿದ್ದ ಮಗ ತೆಂಗಿನಮರದಿಂದ ಬಿದ್ದು ಸಾವು!
ಹಾಗೆಯೇ ಔರೈಯಾದಲ್ಲಿ 14 ವರ್ಷದ ಬಾಲಕ ಮಾವಿನ ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ. ಹಾಗೆಯೇ ದಿಯೋರಿಯಾದಲ್ಲಿ ಪೋಷಕರು ಇದ್ದ ಹೊಲದತ್ತ ಹೋಗುತ್ತಿದ್ದ ವೇಳೆ 5 ವರ್ಷದ ಬಾಲಕಿ ಸಿಡಿಲು ಬಡಿದು ಮೃತಪಟ್ಟಿದ್ದಾಳೆ. ಹಾಗೆಯೇ ವಾರಣಾಸಿಯಲ್ಲಿ ಇಬ್ಬರು ಸೋದರರು ಮೃತಪಟ್ಟಿದ್ದಾರೆ. ಈ ಮಧ್ಯೆ ಹವಾಮಾನ ಇಲಾಖೆಯೂ ರಾಜ್ಯಾದ್ಯಂತ ಮತ್ತಷ್ಟು ಮಳೆಯ ಮುನ್ಸೂಚನೆ ನೀಡಿದೆ. ಜೊತೆಗೆ ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯಗಳಲ್ಲೂ ಜೋರಾಗಿ ಮಳೆಯಾಗುವ ಸೂಚನೆ ನೀಡಿದೆ.