Asianet Suvarna News Asianet Suvarna News

ಮಿಗ್‌-27 ಹೋಯ್ತು; ಇನ್ನೂ ಇದೆ ಹಾರಾಡುವ ಶವಪೆಟ್ಟಿಗೆ ಮಿಗ್‌-21!

ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಮಿಗ್‌ 27 ಯುದ್ಧ ವಿಮಾನಗಳು ಅಧಿಕೃತವಾಗಿ ಸೇವೆಯಿಂದ 2019ರ ಡಿಸೆಂಬರ್‌ 27ಕ್ಕೆ ತಮ್ಮ ಅಂತಿಮ ಹಾರಾಟ ನಡೆಸಿವೆ. ಅದರೊಂದಿಗೆ ಭಾರತೀಯ ವಾಯುಪಡೆಯಿಂದ ಅಧಿಕೃತವಾಗಿ ಹಿಂದೆ ಸರಿದಿವೆ. ಕಾರ್ಗಿಲ್‌ ಯುದ್ಧದಲ್ಲಿ ಇವುಗಳ ಅನುಪಮ ಸೇವೆ ವರ್ಣಿಸಲು ಅಸಾಧ್ಯ.

farewell MiG 27: here are the other fighter jets indian air force currently operates
Author
Bengaluru, First Published Dec 28, 2019, 5:18 PM IST
  • Facebook
  • Twitter
  • Whatsapp

ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಸ್ಥಾನಮಾನ ಮಹತ್ವದ್ದು. ಭಾರತ ಎದುರಿಸಿದ ನಾಲ್ಕು ಪ್ರಮುಖ ಯುದ್ಧಗಳಲ್ಲಿ ಮಿಗ್‌​-21 ಮತ್ತು ಮಿಗ್‌-27 ಯುದ್ಧ ವಿಮಾನಗಳ ಪಾತ್ರ ಮರೆಯಲು ಅಸಾಧ್ಯ. ತಂತ್ರಜ್ಞಾನದಲ್ಲಿ ಬಹಳಷ್ಟುಹಳೆಯ ಯುದ್ಧ ವಿಮಾನಗಳನ್ನು ವಾಯುಪಡೆ ಇಂದಿಗೂ ಬಳಕೆ ಮಾಡುತ್ತಿದೆ. ಅದರಿಂದಾಗಿ ಸಾಕಷ್ಟು ಸಮಸ್ಯೆಯನ್ನೂ ಎದುರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ರಷ್ಯಾ ನಿರ್ಮಿತ ಮಿಗ್‌-27 ಯುದ್ಧ ವಿಮಾನಗಳ ಹಾರಾಟವನ್ನು ನಿನ್ನೆಗೆ ಕೊನೆಗೊಳಿಸಿದೆ. ಆದರೆ, ಇದೇ ಮಿಗ್‌ ಸರಣಿಯ ಮಿಗ್‌-21 ಯುದ್ಧ ವಿಮಾನಗಳು 100ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಾಯುಪಡೆಯಲ್ಲಿ ಬಳಕೆಯಲ್ಲಿವೆ. ಈ ಮಿಗ್‌-21ಗಳನ್ನು ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾಗುತ್ತವೆ.

ಏಕೆಂದರೆ ಇವು ತಾಂತ್ರಿಕ ದೋಷದಿಂದಾಗಿ ಪದೇಪದೇ ಪತನಗೊಂಡು ಪೈಲಟ್‌ಗಳನ್ನು ಬಲಿ ಪಡೆಯುತ್ತವೆ. ಆದರೂ ಮಿಗ್‌-27ಗೆ ವಿದಾಯ ಹೇಳಿದ ವಾಯುಪಡೆ ಮಿಗ್‌-21ಗಳನ್ನು ಇನ್ನೂ ಏಕೆ ಇಟ್ಟುಕೊಂಡಿದೆ? ವಿವರ ಇಲ್ಲಿದೆ.

ಜೋಧ್‌ಪುರ್ ವಾಯುನೆಲೆಯಲ್ಲಿ 'ಬಹದ್ದೂರ್' ಕೊನೆ ಹಾರಾಟ: ಇತಿಹಾಸ ಪುಟ ಸೇರಿದ ಮಿಗ್‌-27!

ಮಿಗ್‌-27 ಎನ್ನುವ ‘ಬಹದ್ದೂರ್‌’ ಚಾಣಾಕ್ಷ

ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಮಿಗ್‌ 27 ಯುದ್ಧ ವಿಮಾನಗಳು ಅಧಿಕೃತವಾಗಿ ಸೇವೆಯಿಂದ 2019ರ ಡಿಸೆಂಬರ್‌ 27ಕ್ಕೆ ತಮ್ಮ ಅಂತಿಮ ಹಾರಾಟ ನಡೆಸಿವೆ. ಅದರೊಂದಿಗೆ ಭಾರತೀಯ ವಾಯುಪಡೆಯಿಂದ ಅಧಿಕೃತವಾಗಿ ಹಿಂದೆ ಸರಿದಿವೆ. ಕಾರ್ಗಿಲ್‌ ಯುದ್ಧದಲ್ಲಿ ಇವುಗಳ ಅನುಪಮ ಸೇವೆ ವರ್ಣಿಸಲು ಅಸಾಧ್ಯ.

1980 ರ ದಶಕದಲ್ಲಿ ಸೋವಿಯತ್‌ ಒಕ್ಕೂಟ (ರಷ್ಯಾ)ದಿಂದ ಖರೀದಿಸಲಾಗಿದ್ದ ಈ ವಿಮಾನಗಳ ದಾಳಿಯ ಸಾಮರ್ಥ್ಯವನ್ನು ಕಂಡಿದ್ದ ವಾಯುಪಡೆ ಅಧಿಕಾರಿಗಳು ಇವುಗಳಿಗೆ ‘ಬಹದ್ದೂರ್‌’ ಎಂದು ಹೆಸರಿಟ್ಟು ಗೌರವಿಸಿದ್ದರು. 3 ದಶಕಗಳ ಕಾಲ ಸೇವೆ ಸಲ್ಲಿಸಿ ಭಾರತದ ತಂಟೆಗೆ ಶತ್ರುಗಳು ಬರದಂತೆ ಎಚ್ಚರವಹಿಸಿದ್ದ ಈ ವಿಮಾನಗಳು ತೆರೆಮರೆಗೆ ಸರಿದಿವೆ. 165 ಮಿಗ್‌-27 ವಿಮಾನಗಳು ಶುಕ್ರವಾರ ರಾಜಸ್ಥಾನದ ಜೋಧಪುರದಲ್ಲಿ ಕೊನೆಯ ಹಾರಾಟ ನಡೆಸಿದವು.

ಮಿಗ್‌-21 ಎನ್ನುವ ವಿಧವೆಯರ ಸೃಷ್ಟಿಕರ್ತ!

ಭಾರತೀಯ ವಾಯುಪಡೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುದ್ಧ ವಿಮಾನಗಳು ಮಿಗ್‌-21. 1956ರಲ್ಲಿ ರಷ್ಯಾ ಉತ್ಪಾದಿಸಿದ ಈ ಸೂಪರ್‌ಸಾನಿಕ್‌ (ಆಗಿನ ಕಾಲಕ್ಕೆ) ಭಾರತದ ವಾಯುಪಡೆಗೆ 1965ರಲ್ಲಿ ಸೇರಿಕೊಂಡವು.

ಬಳಿಕ ಭಾರತೀಯ ವಾಯುಪಡೆಯನ್ನು ಅಕ್ಷರಶಃ ಸಮರ್ಥ ವಾಯುಪಡೆಯ ಖ್ಯಾತಿಗೆ ತಂದು ನಿಲ್ಲಿಸಿದ್ದವು. ಭಾರತೀಯ ಸೇನೆಯಲ್ಲಿ 113 ಮಿಗ್‌-21 ಸೇವೆ ಸಲ್ಲಿಸುತ್ತಿವೆ. ಆದರೆ, ಈ ವಿಮಾನಗಳು ಖ್ಯಾತಿಯೊಂದಿಗೆ ಕುಖ್ಯಾತಿಯನ್ನೂ ಪಡೆದವು. ಏಕೆಂದರೆ ಮಿಗ್‌-21 ಯುದ್ಧ ವಿಮಾನಗಳು ಪದೇಪದೇ ಪತನಗೊಂಡಿವೆ.

50 ವರ್ಷಕ್ಕೂ ಹೆಚ್ಚು ವಯಸ್ಸಾದ ಈ ಹಳೆಯ ವಿಮಾನಗಳನ್ನು ವಾಯುಪಡೆಯು ದುರಸ್ತಿ ಮಾಡಿ, ಅಪ್‌ಗ್ರೇಡ್‌ ಮಾಡಿ ಬಳಸಿಕೊಳ್ಳುತ್ತಿದೆ. 1970ರಿಂದ ಇಲ್ಲಿಯವರೆಗೆ 180 ಮಂದಿ ವಾಯುಪಡೆಯ ಸಿಬ್ಬಂದಿ ಮಿಗ್‌-21 ಅಪಘಾತದಲ್ಲಿ ಪ್ರಾಣತೆತ್ತಿದ್ದಾರೆ. ಅಲ್ಲದೆ 40 ನಾಗರಿಕರೂ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಇವುಗಳಿಗೆ ಹಾರಾಡುವ ಶವ ಪೆಟ್ಟಿಗೆ ಹಾಗೂ ವಿಧವೆಯರ ಸೃಷ್ಟಿಕರ್ತ ಎಂಬ ಕುಖ್ಯಾತಿ ಬಂದಿದೆ.

ಮಿಗ್‌-21 ಪದೇಪದೇ ಪತನಗೊಳ್ಳುವುದೇಕೆ?

ಹೌದು. ಈ ವಿಮಾನಗಳ ರಚನೆ ಬಹು ಸಂಕೀರ್ಣವಾಗಿದೆ. ಪೈಲಟ್‌ ಕೂರುವ ಕಾಕ್‌ಪಿಟ್‌ ಮುಂಭಾಗದಲ್ಲಿಯೇ ಎಂಜಿನ್‌ ಇದೆ. ಅಲ್ಲದೆ ಟರ್ಬೋದ ಫ್ಯಾನ್‌ ಮುಂಭಾಗದಲ್ಲಿದೆ. ಇವು ಸಿಂಗಲ್‌ ಎಂಜಿನ್‌ ವಿಮಾನವಾಗಿದ್ದು, ಆಕಾಶ ಮಾರ್ಗದಲ್ಲಿ ಹಕ್ಕಿಗಳ ಹೊಡೆತಕ್ಕೆ ಸಿಕ್ಕರೆ ತಕ್ಷಣವೇ ಫ್ಯಾನ್‌ ಸ್ಥಗಿತಗೊಳ್ಳುತ್ತದೆ. ಬಳಿಕ ಎಂಜಿನ್‌ ಕಾರ‍್ಯನಿರ್ವಹಿಸುವುದಿಲ್ಲ. ಪರ್ಯಾಯ ಎಂಜಿನ್‌ ಇಲ್ಲದಿರುವುದರಿಂದ ವಿಮಾನ ನಿಯಂತ್ರಣ ಅಸಾಧ್ಯ. ಹೀಗಾಗಿ ವಿಮಾನವನ್ನು ನಿಯಂತ್ರಿಸಿ, ಲ್ಯಾಂಡಿಂಗ್‌ ಮಾಡಲು ಆಗದೇ ವಿಮಾನ ಪತನಗೊಳ್ಳುತ್ತದೆ.

ಪೈಲಟ್‌ ತಕ್ಷಣವೇ ಪ್ಯಾರಾಚೂಟ್‌ ಬಳಸಿ ಹಾರಿಕೊಂಡರೆ ಬದುಕುತ್ತಾನೆ. ಕಾರಣಾಂತರದಿಂದ ಅದು ಸಾಧ್ಯವಾಗದೆ ಇದ್ದರೆ ಮರಣಹೊಂದುತ್ತಾನೆ. ಅಲ್ಲದೆ, ಹಾರಾಟದ ಸಮಯದಲ್ಲಿ ವಾಯುಪಡೆಯ ಸಿಬ್ಬಂದಿ ಮಾಡುವ ತಾಂತ್ರಿಕ ತಪ್ಪುಗಳು ಕೂಡ ಮಿಗ್‌-21 ಅವಘಡಕ್ಕೆ ಕಾರಣವಾಗಿವೆ. ಅದಕ್ಕೆ ಕಾರಣ ಈ ವಿಮಾನದ ಸಂಕೀರ್ಣ ರಚನೆ ಹಾಗೂ ಇದನ್ನು ಚಲಾಯಿಸಲು ಬೇಕಾದ ಅತಿಯಾದ ಜಾಣ್ಮೆ ಎಂಬ ಆರೋಪವಿದೆ.

ಮಿಗ್‌-21 ಏಕೆ ಇನ್ನೂ ಸೇವೆಯಲ್ಲಿದೆ?

1.ಮಿಗ್‌-21 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯಲ್ಲಿ 60ರ ದಶಕದಿಂದ ಸೇವೆ ಸಲ್ಲಿಸುತ್ತಿವೆ. ಇವುಗಳ ಸಾಮರ್ಥ್ಯವನ್ನು ಮತ್ತೊಂದು ವಿಮಾನ ಭರ್ತಿ ಮಾಡಲು ಇಂದಿಗೂ ಸಾಧ್ಯವಾಗಿಲ್ಲ.

2.ವಿಮಾನ ಹಾರಿಸುವ ವಾಯುಪಡೆಯ ಸಿಬ್ಬಂದಿಗೆ ಶತ್ರುವಿನ ಮೇಲೆ ನಿಗಾ ಇಟ್ಟು, ಅವರ ನೆಲೆಗಳನ್ನು ಉಡಾಯಿಸುವ ಶಕ್ತಿ ನೀಡುವಲ್ಲಿ ಮಿಗ್‌-21 ಬಹಳ ಪರಿಣಾಮಕಾರಿ ವಿಮಾನ.

3.ವಾಯುಪಡೆಗೆ ಹೊಸದಾಗಿ ಸೇರಿದ ಸಿಬ್ಬಂದಿಗೆ ತರಬೇತಿ ನೀಡಲು ಮಿಗ್‌-21 ಅತ್ಯುತ್ತಮ ವಿಮಾನಗಳಾಗಿವೆ.

4.1980ರ ದಶಕದಿಂದಲೂ ವಾಯುಪಡೆಯು ಭಾರತ ಸರ್ಕಾರಕ್ಕೆ ಮಿಗ್‌-21 ಯುದ್ಧ ವಿಮಾನಗಳ ಬದಲಿ ವ್ಯವಸ್ಥೆಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಸರ್ಕಾರ ತೇಜಸ್‌ ಯುದ್ಧ ವಿಮಾನಗಳನ್ನು ಸೇನೆಗೆ ನೀಡಲು ಮುಂದಾಯಿತು. ಆದರೆ ಈ ತೇಜಸ್‌ಗಳು ಮಿಗ್‌-21 ವಿಮಾನದಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡಲು ವಿಫಲವಾದವು.

5.ತೇಜಸ್‌ಗಳ ದೌರ್ಬಲ್ಯದ ಹಿನ್ನೆಲೆಯಲ್ಲಿ ಮಿಗ್‌-21 ವಿಮಾನಗಳನ್ನೇ ಸೇವೆಯಲ್ಲಿ ಮುಂದುವರಿಸಲು ನಿರ್ಧರಿಸಲಾಯಿತು. ಇದಕ್ಕೆ ಪೂರಕವಾಗಿ ಮಿಗ್‌-21ರ ಎಂಜಿನ್‌, ರಾಡಾರ್‌ ಇನ್ನಿತರ ವಿಭಾಗಗಳ ಉನ್ನತೀಕರಣಕ್ಕೆ ನಿರ್ಧರಿಸಿ ಒಂದಿಷ್ಟುಬದಲಾವಣೆಯನ್ನು ಮಾಡಿ ಮತ್ತೆ ಸೇವೆಯಲ್ಲಿ ಮುಂದುವರಿಸಲಾಯಿತು.

6.ಮಿಗ್‌-21ಕ್ಕೆ ಪರಾರ‍ಯಯ ವಿಮಾನಗಳನ್ನು ವಾಯುಪಡೆಗೆ ನೀಡಲು ರಾಜಕೀಯ ನಾಯಕರ ನಿಧಾನಗತಿಯ ನಿರ್ಧಾರಗಳೂ ಅಡ್ಡಿಯಾಗಿವೆ.

7.ಮಿಗ್‌-21 ವಿಮಾನಗಳನ್ನು ತಯಾರಿಸುವ ರಷ್ಯಾದ ಕಂಪನಿ 1980ರಲ್ಲಿಯೇ ಈ ವಿಮಾನಗಳ ಉತ್ಪಾದನೆ ನಿಲ್ಲಿಸಿದೆ. ಹೀಗಾಗಿ ಈ ವಿಮಾನಗಳ ಬಿಡಿ ಭಾಗಗಳು ರಷ್ಯಾದಿಂದ ಸಿಗುತ್ತಿಲ್ಲ. ಆ ಕಾರಣದಿಂದ ಭಾರತವು ಇಸ್ರೇಲ್‌, ಉಕ್ರೇನ್‌ ದೇಶಗಳಿಂದ ಮಿಗ್‌-21ರ ಬಿಡಿಭಾಗಗಳನ್ನು ತರಿಸಿಕೊಳ್ಳುತ್ತಿದೆ. ಇವು ಉತ್ತಮ ದರ್ಜೆಯವಲ್ಲ. ಹಾಗಾಗಿ ವಿಮಾನ ಅಪಘಾತಕ್ಕೆ ಕಳಪೆ ಗುಣಮಟ್ಟದ ಬಿಡಿಭಾಗಗಳು ಕಾರಣ ಎಂದು ರಷ್ಯಾ ಹೇಳುತ್ತದೆ.

ಅಭಿನಂದನ್‌ ಬಳಸಿದ್ದು ಇದೇ ವಿಮಾನ

ಮಿಗ್‌-21 ವಿಮಾನಗಳ ಬಗ್ಗೆ ಏನೇ ದೂರುಗಳಿದ್ದರೂ ಆಗಿನ ಕಾಲಘಟ್ಟಕ್ಕೆ ಭಾರತದ ರಕ್ಷಣೆಯಲ್ಲಿ ಇವುಗಳ ಕೊಡುಗೆ ಅಪಾರ. 1965 ರಲ್ಲಿ ಭಾರತಕ್ಕೆ ಬಂದ ಈ ವಿಮಾನಗಳು 1971 ರ ಯುದ್ಧದಲ್ಲಿ ಭಾರತಕ್ಕೆ ಜಯ ತಂದುಕೊಡುವಲ್ಲಿ ವಹಿಸಿದ ಪಾತ್ರ ಮರೆಯಲು ಅಸಾಧ್ಯ. ಅಲ್ಲದೆ 1999ರ ಕಾರ್ಗಿಲ್‌ ಯುದ್ಧದಲ್ಲಿ ಮಿಗ್‌-27 ವಿಮಾನದೊಂದಿಗೆ ಮಿಗ್‌-21 ಕೂಡ ಸೇವೆ ಸಲ್ಲಿಸಿ ಪಾಕಿಸ್ತಾನವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, 2019ರ ಫೆಬ್ರವರಿಯಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ 12 ಮಿರಾಜ್‌-2000 ವಿಮಾನಗಳು ಪಾಕಿಸ್ತಾನದ ಗಡಿ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಯನ್ನು ಅತ್ಯಂತ ನಿಖರವಾಗಿ ನಾಶಪಡಿಸಿದವು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಅಮೆರಿಕ ನೀಡಿದ್ದ ಅತ್ಯಾಧುನಿಕ ಯುದ್ಧ ವಿಮಾನ ಎಫ್‌-16 ಬಳಸಿ ಭಾರತದ ಮೇಲೆ ದಾಳಿ ಮಾಡಲು ಮುಂದಾಯಿತು. ಈ ವೇಳೆ ಭಾರತದ ಗಡಿ ಭಾಗದಿಂದಲೇ ಮಿರಾಜ್‌-2000 ವಿಮಾನಗಳ ಬೆಂಬಲದೊಂದಿಗೆ ಮಿಗ್‌-21 ವಿಮಾನಗಳನ್ನೇ ಬಳಸಿ ಭಾರತದ ವಾಯುಪಡೆಯು ಎಫ್‌-16ಗಳನ್ನು ತಡೆಯಿತು. ಅಲ್ಲದೆ ಅಭಿನಂದನ್‌ ವರ್ಧಮಾನ್‌ ಮಿಗ್‌-21 ವಿಮಾನ ಬಳಸಿಯೇ ಎಫ್‌-16 ವಿಮಾನವನ್ನು ಹೊಡೆದುರುಳಿಸಿದರು. ಈ ಘಟನೆ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿತು. ಇದೊಂದು ರೀತಿಯಲ್ಲಿ ರಷ್ಯಾ- ಅಮೆರಿಕದ ಸಾಮರ್ಥ್ಯವನ್ನು ಕೂಡ ಒರೆಗೆ ಹಚ್ಚಿತ್ತು.

ಮಿಗ್‌-21 ಸ್ಥಗಿತಗೊಳಿಸಲು ಸೋಷಿಯಲ್‌ ಮೀಡಿಯಾಗಳಲ್ಲೂ ಬೇಡಿಕೆ

ಹಾರಾಡುವ ಶವಪೆಟ್ಟಿಗೆ ಖ್ಯಾತಿಯ ಮಿಗ್‌-21 ವಿಮಾನಗಳನ್ನು ಇನ್ನೂ ಬಳಸುತ್ತಿರುವುದನ್ನು ಭಾರತೀಯರು ತೀವ್ರವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಮಿಗ್‌-21 ಸೇವೆಯನ್ನು ಹಿಂಡೆಯುವಂತೆ ಒತ್ತಡ, ಆಗ್ರಹಗಳು ವ್ಯಕ್ತವಾಗಿವೆ. ಆದರೆ ಯುದ್ಧ ಕಾಲದಲ್ಲಿ ಮಾತ್ರ ನೆನಪಾಗುವ ಸೈನಿಕರು ಶಾಂತಿ ಕಾಲದಲ್ಲಿ ತೆರೆಮರೆಗೆ ಸರಿಯುತ್ತಾರೆ. ರಾಜಕೀಯ ನಿರ್ಧಾರಗಳ ವಿಳಂಬದಿಂದಾಗಿ ಮಿಗ್‌-21 ಇನ್ನೂ ಸೇವೆಯಲ್ಲಿ ಉಳಿದುಕೊಂಡಿದೆ.

ಇನ್ನು 5 ವರ್ಷದಲ್ಲಿ ಮಿಗ್‌-21 ಹಾರಾಟ ಸ್ಥಗಿತ?

ಹೊಸ ಯುದ್ಧ ವಿಮಾನಗಳಿಗೆ ಭಾರತೀಯ ವಾಯುಪಡೆ 2 ದಶಕದಿಂದ ಬೇಡಿಕೆ ಇಡುತ್ತಲೇ ಬಂದಿದೆ. ಅದಕ್ಕೆ ತಡವಾಗಿಯಾದರೂ ಸ್ಪಂದಿಸಿರುವ ಸರ್ಕಾರ ಮಿಗ್‌-27 ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯಲು ಯೋಜಿಸಿದಂತೆ ಕಾರ‍್ಯರೂಪಕ್ಕೆ ತಂದಿದೆ. ಅಲ್ಲದೆ ಮಿಗ್‌-21 ವಿಮಾನಗಳ ಹಾರಾಟ ನಿಲ್ಲಿಸಲು ಕೂಡ ಚಿಂತನೆ ನಡೆಸಿದೆ. ಇದಕ್ಕಾಗಿ 5 ವರ್ಷಗಳ ಯೋಜನೆ ಹಾಕಿಕೊಂಡಿದೆ. ಆದರೆ ಮಿಗ್‌-21 ವಿಮಾನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಾರ‍ಯಯ ವ್ಯವಸ್ಥೆಯ ಜಾರಿ ರಾಜಕೀಯ ನಾಯಕರ ಮೇಲಿದೆ. ಅಂದುಕೊಂಡಂತೆ ಆದರೆ ಮಿಗ್‌-21 ಇನ್ನೈದು ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಪಡೆಯಲಿವೆ.

Follow Us:
Download App:
  • android
  • ios