* ದೇವೇಗೌಡರ ಭೇಟಿಗೆ ಬೆಂಗಳೂರಿಗೆ ತೆರಳಿದ ಸಿಎಂ ಕೆಸಿಆರ್‌ಗೆ ಟಾಂಗ್* ಕುಟುಂಬ ಪಕ್ಷಗಳು ದೇಶದ ಶತ್ರು: ಮೋದಿ* ಯಾವಾಗಲೂ ತಮ್ಮ ಪ್ರಗತಿಯ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತವೆ
ಹೈದರಾಬಾದ್(ಮೇ.27): ತೆಲಂಗಾಣ ರಾಜಧಾನಿಗೆ ಆಗಮಿಸುತ್ತಿದ್ದರೂ ತಮ್ಮನ್ನು ಸ್ವಾಗತಿಸದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿಗಾಗಿ ಬೆಂಗಳೂರಿಗೆ ತೆರಳಿದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟಾಂಗ್ ನೀಡಿದ್ದಾರೆ. ಕುಟುಂಬಗಳು ನಡೆಸುವ ಪಕ್ಷಗಳು ಯಾವಾಗಲೂ ತಮ್ಮ ಪ್ರಗತಿಯ ಬಗ್ಗೆ ಮಾತ್ರವೇ ಯೋಚಿಸುತ್ತಿರುತ್ತವೆ. ಹೀಗಾಗಿ ಅಂತಹ ಪಕ್ಷಗಳು ದೇಶದ ಅತಿದೊಡ್ಡ ಶತ್ರುಗಳು ಎಂದು ಹರಿಹಾಯ್ದಿದ್ದಾರೆ.
ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿವಾರವಾದಿ ಪಕ್ಷಗಳು ರಾಜಕೀಯಕ್ಕಷ್ಟೇ ಸಮಸ್ಯೆ ಅಲ್ಲ. ಈ ದೇಶದ ಪ್ರಜಾಪ್ರಭುತ್ವ ಹಾಗೂ ಯುವಶಕ್ತಿಗೂ ಅಪಾಯಕಾರಿ. ಕುಟುಂಬಗಳು ಮುನ್ನಡೆಸುವ ಪಕ್ಷಗಳು ಯಾವ ರೀತಿ ತಮ್ಮ ಅನುಕೂಲಕ್ಕೆ ಕಾಳಜಿ ವಹಿಸುತ್ತಿವೆ ಎಂಬುದನ್ನು ತೆಲಂಗಾಣದ ಜನತೆ ನೋಡುತ್ತಿದ್ದಾರೆ. ಈ ಪಕ್ಷಗಳು ಬಡ ಜನರ ಸಮಸ್ಯೆಗಳ ಬಗ್ಗೆ ಎಂದಿಗೂ ಚಿಂತೆ ಪಡುವುದಿಲ್ಲ. ಕುಟುಂಬಕ್ಕೆ ಸಮರ್ಪಿತವಾದ ಪಕ್ಷಗಳಿಗೆ ಭ್ರಷ್ಟಾಚಾರ ಎಂಬುದು ಹೇಗೆ ಮುಖವಾಗಿದೆ ಎಂಬುದನ್ನು ಈ ದೇಶ ನೋಡಿದೆ ಎಂದು ಚಾಟಿ ಬೀಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ಪರ ದಶಕಗಳ ಕಾಲ ನಡೆದ ಹೋರಾಟ ನಡೆದಿತ್ತು. ಉಜ್ವಲ ಭವಿಷ್ಯಕ್ಕಾಗಿ ಸಹಸ್ರಾರು ಮಂದಿ ಪ್ರಾಣಾರ್ಪಣೆ ಮಾಡಿದರು. ಆ ಪ್ರತಿಭಟನೆ ನಡೆಸಿದ್ದು ತೆಲಂಗಾಣ ಅಭಿವೃದ್ಧಿಯ ಕನಸನ್ನು ಧ್ವಂಸಗೊಳಿಸುವ ಒಂದು ಕುಟುಂಬದ ಪರವಾಗಿ ಅಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ತಿಂಗಳ ಹಿಂದೆ ಹೈದರಾಬಾದ್‌ಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಅನಾರೋಗ್ಯದ ನೆಪ ನೀಡಿ ಚಂದ್ರಶೇಖರರಾವ್ ದೂರ ಉಳಿದಿದ್ದರು. ಇದೀಗ ತಮ್ಮ ಸರ್ಕಾರದ 8ನೇ ವರ್ಷಾಚರಣೆಯಂದೇ ಆಯೋಜಿತವಾಗಿದ್ದ ಇಂಡಿಯನ್ ಸ್ಕೂಲ್ ಆಫ್ ಬುಸಿನೆಸ್‌ನ 20ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಮೋದಿ ಹೈದರಾಬಾದ್‌ಗೆ ಬಂದಿಳಿದರೂ ಪರಾರಯಯ ರಾಜಕೀಯ ರಂಗದ ಕುರಿತು ಮಾತುಕತೆ ನಡೆಸಲು ಕೆಸಿಆರ್ ಅವರು ದೇವೇಗೌಡರ ಭೇಟಿಗೆ ಬೆಂಗಳೂರಿಗೆ ತೆರಳಿದರು.
ಇಂಡಿಯಾ ಅಂದರೆ ಬಿಸಿನೆಸ್: ಮೋದಿ
ಇಂಡಿಯಾ ಎಂದರೆ ಬಿಸಿನೆಸ್ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಆಡಳಿತಕ್ಕೆ ರಿಫಾಮ್‌ರ್, ಪರ್ಫಾಮ್‌ರ್, ಟ್ರಾನ್ಸ್‌ಫಾಮ್‌ರ್ (ಸುಧಾರಣೆ, ಕಾರ್ಯನಿರ್ವಹಣೆ, ಬದಲಾವಣೆ) ಎಂಬ ಹೊಸ ಮೂರು ಮಂತ್ರವನ್ನು ಹೇಳಿದ್ದಾರೆ.
ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ 20ನೇ ವರ್ಷಾಚರಣೆಯಲ್ಲಿ ಗುರುವಾರ ಮಾತನಾಡಿದ ಅವರು, ವಿಶ್ವದ ಶೇ.40ರಷ್ಟುಡಿಜಿಟಲ್ ವಹಿವಾಟುಗಳು ಭಾರತದಲ್ಲೇ ಆಗುತ್ತಿವೆ. ಕಳೆದ ವರ್ಷ ದಾಖಲೆ ಮೊತ್ತದ ವಿದೇಶಿ ಹೂಡಿಕೆಯನ್ನು ಭಾರತ ಸ್ವೀಕರಿಸಿದೆ. ಕೋವಿಡ್‌ಗಾಗಿ ತನ್ನದೇ ಆದ ಲಸಿಕೆ ಶೋಧಿಸಿ 100 ದೇಶಗಳಿಗೆ ರಫ್ತು ಮಾಡಿದೆ ಎಂದು ಹೇಳಿದರು.
ಕಳೆದ 8 ವರ್ಷಗಳನ್ನು ಹಿಂದಿನ 3 ದಶಕಗಳಿಗೆ ಹೋಲಿಸಿದರೆ, ಅಗತ್ಯ ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಅಸ್ಥಿರತೆಯಿಂದಾಗಿ ಸುಧಾರಣೆಗಳು ನಡೆದಿರಲಿಲ್ಲ. ಹಿಗಾಗಿ ದೇಶ ಬೃಹತ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗಿರಲಿಲ್ಲ. 2014ರ ನಂತರ ಭಾರತದ ರಾಜಕೀಯ ಇಚ್ಛಾಶಕ್ತಿ ಹಾಗೂ ಸುಧಾರಣೆಗಳನ್ನು ಕಾಣುತ್ತಿದೆ ಎಂದರು.
