ಬಾಟಲಿಯಲ್ಲಿ ಗ್ಲುಕೋಸ್‌, ಉಪ್ಪು ಸೇರಿಸಿ ರೆಮ್‌ಡೆಸಿವಿರ್‌ ಎಂದು ಸೇಲ್‌| ಗುಜರಾತ್‌ ಪೊಲೀಸರಿಂದ 2.73 ಲಕ್ಷ ಡೋಸ್‌ನಷ್ಟುನಕಲಿ ಔಷಧ ವಶ

ಅಹಮದಾಬಾದ್‌(ಮೇ.05): ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡೆಸಿವಿರ್‌ ಇಂಜೆಕ್ಷನ್‌ನ ಕೊರತೆ ಎದುರಾಗಿರುವಾಗಲೇ, ಗುಜರಾತಿನಲ್ಲಿ ನಕಲಿ ರೆಮ್‌ಡೆಸಿವಿರ್‌ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ರೆಮ್‌ಡೆಸಿವಿರ್‌ನ ಗಾಜಿನ ಬಾಟಲ್‌ನಲ್ಲಿ ಗ್ಲುಕೋಸ್‌ ಹಾಗೂ ಉಪ್ಪನ್ನು ಸೇರಿಸಿ ಹೊಸ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದರು.

ಸೂರತ್‌ನ ಮೊರ್ಬಿ ಹಾಗೂ ಅಹಮದಾದ್‌ನ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ ಪೊಲೀಸರು 3,371 ನಕಲಿ ಔಷಧ ಬಾಟಲಿ (2.73 ಲಕ್ಷ ಡೋಸ್‌) ಗಳನ್ನು ವಶಪಡಿಸಿಕೊಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಪ್ರತಿ ಬಾಟಲಿಗೆ 4500 ರು.ನಂತೆ ಇವುಗಳ ಮಾರುಕಟ್ಟೆಮೌಲ್ಯ ಸುಮಾರು 1.61 ಕೋಟಿ ರು. ಎಂದು ಅಂದಾಜಿಸಲಾಗಿದೆ. ನಕಲಿ ಔಷಧಿಯನ್ನು ಮಾರಾಟದಿಂದ ಆರೋಪಿಗಳು 90.27 ಲಕ್ಷ ರು.ಗಳಿಸಿದ್ದರು. ದಾಳಿಯ ವೇಳೆ ಈ ಹಣವನ್ನು ಜಪ್ತಿ ಮಾಡಲಾಗಿದೆ.

"

ಮುಂಬೈನಿಂದ ರೆಮ್‌ಡೆಸಿವಿರ್‌ನ ಖಾಲಿ ಬಾಟಲಿಗಳನ್ನು ತರಿಸಿಕೊಂಡು ಅದರೊಳಗೆ 33 ಗ್ರಾಮ್‌ ಗ್ಲುಕೋಸ್‌ ಹಾಗೂ ಉಪ್ಪಿನ ಮಿಶ್ರಣವನ್ನು ತುಂಬಿಸಿ ಅದಕ್ಕೆ ನಕಲಿ ಬ್ರ್ಯಾಂಡ್‌ನ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು. ಬಳಿಕ ನಕಲಿ ಔಷಧ ಬಾಟಲಿಗಳನ್ನು ಗುಜರಾತಿನ ವಿವಿಧ ಭಾಗಗಳಿಗೆ ರವಾನಿಸಲಾಗುತ್ತಿತ್ತು. ಪ್ರತಿ ಬಾಟಲಿಗೆ 2500 ರು.ನಿಂದ 5000 ರು.ಗೆ ಮಾರಾಟ ಮಾಡಲಾಗುತ್ತು. ಆರೋಪಿಗಳ ವಿರುದ್ಧ ಉದ್ದೇಶ ಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona