ಫಲಕ ಹಿಡಿದು ಸಾಲಾಗಿ ನಿಂತ ಮಹಿಳೆಯರಿಗೆ ವ್ಯಕ್ತಿಯೊಬ್ಬ ಹಣ ನೀಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ, ದೆಹಲಿಯ ಶಹೀನ್‌ ಭಾಗ್‌ ಪ್ರತಿಭಟನಾಕಾರರು ದುಡ್ಡು ತೆಗೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

 

ವಿಡಿಯೋದಲ್ಲಿರುವ ಬಹುತೇಕ ಮಹಿಳೆಯರು ಮುಸ್ಲಿಮರಂತೆ ಕಾಣುತ್ತಾರೆ. ವಿಡಿಯೋ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಧ್ವನಿಯೂ ಕೇಳಿಸುತ್ತದೆ. ಈ ವಿಡಿಯೋವು ಬಾರೀ ವೈರಲ್‌ ಆಗುತ್ತಿದೆ. ಇದರೊಂದಿಗೆ ‘ಶಹೀನ್‌ ಭಾಗ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮುಸ್ಲಿಂ ಮಹಿಳೆಯರು ಎಂದು ಒಕ್ಕಣೆ ಬರೆಯಲಾಗಿದೆ. ಈ ಮೂಲಕ ಶಹೀನ್‌ ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್‌ ದುಡ್ಡು ಹಂಚಿ ಜನ ಸೇರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವೀಗ 65,000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ.

Fact Check: ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಮೋದಿ ಪತ್ನಿ!

ವಿಡಿಯೋದ ಸತ್ಯಾಸತ್ಯ ಏನು ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಮಣಿಪುರದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರಿಗೆ ಹಣ ನೀಡುತ್ತಿರುವ ಹಳೆಯ ವಿಡಿಯೋಗೆ ರಾಹುಲ್‌ ಗಾಂಧಿ ಧ್ವನಿಯನ್ನು ಸೇರಿಸಿ ಎಡಿಟ್‌ ಮಾಡಿ ಸೋಷಿಯಲ್‌ ಮೀಡಿಯಾಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಗೂಗಲ್‌ನಲ್ಲಿ ಪರಿಶೀಲಿಸಿದಾಗ 2017 ಅಕ್ಟೋಬರ್‌ 23ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋ ಲಭ್ಯವಾಗಿದೆ. ಅದರಲ್ಲಿ ರಾರ‍ಯಲಿಯಲ್ಲಿ ಪಾಲ್ಗೊಂಡವರಿಗೆ ಕಾಂಗ್ರೆಸ್‌ ಕಾರ‍್ಯಕರ್ತರು ದುಡ್ಡು ಹಂಚುತ್ತಿರುವುದು ಎಂದು ಹೇಳಲಾಗಿದೆ.

ಹಾಗೆಯೇ ಇದೇ ರೀತಿಯ ಇನ್ನೊಂದು ವಿಡಿಯೋವೂ ಪತ್ತೆಯಾಗಿದ್ದು, ಮಣಿಪುರ ಮತದಾರರಿಗೆ ಕಾಂಗ್ರೆಸ್‌ ಹಂಚುತ್ತಿದೆಯೇ’ ಎಂದು ಬರೆಯಲಾಗಿದೆ. ಎರಡೂ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಧ್ವನಿ ಇಲ್ಲ. ಮೊದಲ ವಿಡಿಯೋದಲ್ಲಿ ಮಹಿಳೆ ‘ವಾರ್ಡ್‌ ನಂ5 ಕೆಎಂಸಿ) ಎಂದು ಬರೆದಿದ್ದಾರೆ. ಹೀಗಾಗಿ ಇದು ಮಣಿಪುರದ್ದು ಎಂಬುದು ಖಚಿತವಾಗಿದೆ.

- ವೈರಲ್ ಚೆಕ್