ದೇಶದ ಮೂರನೇ ಅತಿದೊಡ್ಡ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಈಗಷ್ಟೇ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ವೇಳೆ ಸಮುದ್ರದ ಮಧ್ಯೆ ಕಣ್ಣಿಗೆ ಕಾಣಿಸುವವರೆಗೆ ಹಾದು ಹೋಗಿರುವ ಸೇತುವೆ, ಬಣ್ಣಬಣ್ಣದ ದೀಪಗಳಿಂದ ಅಲಂಕೃತವಾಗಿ ಜಗಮಗಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಇದು ಅಮೆರಿಕದ ಲಾಸ್‌ ಏಂಜಲೀಸ್‌ ಅಥವಾ ಲಂಡನ್‌ ಅಲ್ಲ, ನಮ್ಮ ಕನಸಿನ ನಗರಿ ಮುಂಬೈ’ಎಂದು ಬರೆಯಲಾಗಿದೆ. ಈ ಮೂಲಕ ಅಲ್ಲಿನ ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ‍್ಯ ಹೀಗಿದೆ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ.

 

ಅಕ್ಟೋಬರ್‌ 17ರಂದು ‘ಡೋಂಟ್‌ ಗೆಟ್‌ ಸೀರಿಯಸ್‌’ ಫೇಸ್‌ಬುಕ್‌ ಪೇಜ್‌ ಪೋಸ್ಟ್‌ ಮಾಡಿದ್ದ ಈ ಫೋಟೋ 3300 ಲೈಕ್ಸ್‌ ಪಡೆದುಕೊಂಡಿದೆ. ಅನೇಕರು ಶೇರ್‌ ಕೂಡ ಮಾಡಿದ್ದಾರೆ. ಆದರೆ ನಿಜಕ್ಕೂ ಇದು ಮಹಾರಾಷ್ಟ್ರದ ಸೇತುವೆಯೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಕಂಗೊಳಿಸುತ್ತಿರುವ ಬ್ರಿಡ್ಜ್‌ ಮಹಾರಾಷ್ಟ್ರದ ಮುಂಬೈನಲ್ಲಿಲ್ಲ, ದಕ್ಷಿಣ ಕೊರಿಯಾದಲ್ಲಿದೆ ಎಂದು ತಿಳಿದುಬಂದಿದೆ.

ವೈರಲ್‌ ಫೋಟೋ ಜಾಡು ಹಿಡಿದು ಪರಿಶೀಲಿಸಿದಾಗ ‘ಶಟ್ಟರ್‌ಸ್ಟಾಕ್‌’ ವೆಬ್‌ಸೈಟ್‌ನಲ್ಲಿ ಈ ಫೋಟೋಗಳು ಲಭ್ಯವಿವೆ. ಈ ಫೋಟೋ ಸೆರೆಹಿಡಿದ ಫೋಟೋಗ್ರಾಫರ್‌ ಹೆಸರು ನೋಪ್‌ ಪೋಪೈ. ವೈರಲ್‌ ಫೋಟೋವು ದಕ್ಷಿಣ ಕೊರಿಯಾದ ಗ್ವಾಂಗನ್‌ ಬ್ರಿಡ್ಜ್‌ನ ರಾತ್ರಿಹೊತ್ತಿನ ಚಿತ್ರ.

- ವೈರಲ್ ಚೆಕ್