ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತ್ತೀಚೆಗೆ 200 ರು. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಆರ್‌ಬಿಐ ಒಂದು ರುಪಾಯಿಯ ನೋಟು, 20ರು., 100ರು., 150ರು. ಹಾಗೂ 1000ರು.ವಿನ ನಾಣ್ಯಗಳನ್ನು ಬಿಡುಗಡೆ ಮಾಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಆರ್‌ಬಿಐ 1000 ರುಪಾಯಿಯ ನಾಣ್ಯ ಬಿಡುಗಡೆ ಮಾಡಿದೆಯೇ ಎಂದು ಪರಿಶೀಲಿಸಿದಾಗ, ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಬೂಮ್‌ ಲೈವ್‌ ಸುದ್ದಿ ಸಂಸ್ಥೆಯು ಆರ್‌ಬಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗ ಅಲ್ಲಿ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗಲೂ ಯಾವುದೇ ಮುಖ್ಯವಾಹಿನಿಯ ಮಾಧ್ಯಮ ಇದನ್ನು ವರದಿ ಮಾಡಿರಲಿಲ್ಲ.

ಆದರೆ ವೈರಲ್‌ ಆಗಿರುವ ಫೋಟೋಗಳು ಲಭ್ಯವಾಗಿದ್ದು, 2016ರಲ್ಲಿ ಪ್ರಧಾನಿ ನರೇಂದ್ರ ಮೊದಿ 1000 ಮತ್ತು 500 ರು. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಾಗ ಇದೇ ರೀತಿಯ ಸುಳ್ಳು ಸುದ್ದಿ ಹರಿದಾಡಿತ್ತು.

ವೈರಲ್‌ ಆಗಿರುವ 1000 ರು. ಮುಖಬೆಲೆ ನಾಣ್ಯವು ತಾಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ 1000 ವರ್ಷಗಳಾದ ಸ್ಮರಣಾರ್ಥ ಈ ನಾಣ್ಯವನ್ನು ಟಂಕಿಸಲಾಗಿತ್ತು. ಆದರೆ ಅದಕ್ಕೆ ಯಾವುದೇ ಮುಖಬೆಲೆ ಇಲ್ಲ. ಉಳಿದಂತೆ 20 ಮತ್ತು 100 ರು. ನಾಣ್ಯವನ್ನೂ ಆರ್‌ಬಿಐ ಬಿಡುಗಡೆ ಮಾಡಿಲ್ಲ. ಇನ್ನು ಗುಲಾಬಿ ಬಣ್ಣದ 1ರು. ನೋಟು ಮುದ್ರಣವನ್ನು ಆರ್‌ಬಿಐ 1974ರಲ್ಲಿಯೇ ರದ್ದು ಮಾಡಿದೆ.

- ವೈರಲ್ ಚೆಕ್