ಬಹು ನಿರೀಕ್ಷಿತ ದೆಹಲಿ ಚುನಾವಣೆ ಮುಗಿದಿದೆ. ಇಂದು ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಆಮ್‌ ಆದ್ಮಿ, ಬಿಜೆಪಿ, ಕಾಂಗ್ರೆಸ್‌ ಪಕ್ಷದ ಹಣೆಬರಹ ನಿರ್ಧಾರವಾಗಲಿದೆ. ಹೀಗಿರುವಾಗ ಫಲಿತಾಂಶಕ್ಕೂ ಮೊದಲೇ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಸೋಲೊಪ್ಪಿಕೊಂಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact check: ಕೊರೋನಾದಿಂದ ಮುಕ್ತಿ ಕೋರಿ ಮಸೀದಿಗೆ ಮೊರೆ ಹೋದ ಕ್ಸಿ!

ಮನೋಜ್‌ ತಿವಾರಿಯೇ ಸ್ವತಃ ಟ್ವೀಟ್‌ ಮಾಡಿ ಹೀಗೆ ಹೇಳಿದ್ದಾರೆ ಎಂಬಂತೆ ಟ್ವೀಟ್‌ ಸ್ಕ್ರೀನ್‌ಶಾಟ್‌ವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ, ‘ನಾಯಕತ್ವದ ಕೊರತೆಯಿಂದಾಗಿ ನಾವು ದೆಹಲಿ ಚುನಾವಣೆಯನ್ನು ಸೋತಿದ್ದೇವೆ. ಪರ್ವೇಶ್‌ ವರ್ಮಾ, ಹರ್ಷವರ್ಧನ್‌ ಮತ್ತು ರಮೇಶ್‌ ಬಿಧುರಿಯವರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಅವರಿಗೆ ನನ್ನ ಬಗ್ಗೆ ದ್ವೇಷವಿತ್ತು’ ಎಂದಿದೆ. ಇದೀಗ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗುತ್ತಿದೆ.

ಫೇಕು ಎಕ್ಸ್‌ಪ್ರೆಸ್‌ ಎಂಬ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಇದನ್ನು ಪೋಸ್ಟ್‌ ಮಾಡಿ ನಂತರ ಡಿಲೀಟ್‌ ಮಾಡಿದೆ. ಅದಾಗಲೇ 182 ಬಾರಿ ಇದು ಶೇರ್‌ ಆಗಿತ್ತು. ಆದರೆ ಈ ವೈರಲ್‌ ಟ್ವೀಟ್‌ನ ಸತ್ಯಾಸತ್ಯ ಪರಿಶೀಲಿಸಿದಾಗ ಮನೋಜ್‌ ತಿವಾರಿ ಹೆಸರಿನಲ್ಲಿ ನಕಲಿ ಟ್ವೀಟ್‌ ಸೃಷ್ಟಿಸಿ ಹೀಗೆ ಹೇಳಲಾಗಿದೆ ಎನ್ನುವ ವಾಸ್ತವ ಬಯಲಾಗಿದೆ.

ಬೂಮ್‌ ಸುದ್ದಿಸಂಸ್ಥೆ ತಿವಾರಿ ಅವರ ಅಧಿಕೃತ ಟ್ವೀಟ್‌ ಪರಿಶೀಲಿಸಿದಾಗ ಈ ರೀತಿಯ ಯಾವುದೇ ಟ್ವೀಟ್‌ ಕಂಡುಬಂದಿಲ್ಲ. ಆಗ ಆ್ಯಪ್‌ ಬಳಸಿ ನಕಲಿ ಟ್ವೀಟ್‌ ಸೃಷ್ಟಿಸಲಾಗಿದೆ ಎನ್ನುವ ವಾಸ್ತವ ಬಯಲಾಗಿದೆ. ಅಲ್ಲಿಗೆ ದೆಹಲಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ ಸ್ವತಃ ಬಿಜೆಪಿಗರೇ ಒಪ್ಪಿಕೊಂಡಿದ್ದಾರೆ ಎನ್ನುವ ಸಂದೇಶ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್