ಪ್ರತ್ಯೇಕ ಎರಡು ಹಾಸಿಗೆಗಳಿರುವ ರೂಮಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಐ ಸಪೋರ್ಟ್‌ ಪಿಎಂ’ ಎಂಬ ಫೇಸ್‌ಬುಕ್‌ ಪೇಜ್‌ ಇದನ್ನು ಪೋಸ್ಟ್‌ ಮಾಡಿ, ‘ಇವತ್ತಿನ ದಿನದಲ್ಲಿ 10 ರು.ಗೆ ಒಂದು ಸಮೋಸಾ ಕೂಡ ಬರಲ್ಲ. ಆದರೆ ಜವಾಹರ್‌ಲಾಲ್‌ ಯುನಿವರ್ಸಿಟಿ (ಜೆಎನ್‌ಯು) ವಿದ್ಯಾರ್ಥಿಗಳು ದೆಹಲಿಯಂತ ದುಬಾರಿ ನಗರದಲ್ಲಿ 10 ರು. ಕೊಟ್ಟು ಇಂಥ ಸೌಲಭ್ಯಭರಿತ ರೂಮ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೆ ನಾವೆಲ್ಲ ತೆರಿಗೆ ಕಟ್ಟುತ್ತಿದ್ದೇವೆ’ ಎಂದು ಒಕ್ಕಣೆ ಬರೆಯಲಾಗಿದೆ. ಈ ಪೋಸ್ಟ್‌ 12,000 ಬಾರಿ ಶೇರ್‌ ಆಗಿದೆ. ಭಾರತ್‌ ವಿಕಾಸ್‌ ಫೇಸ್‌ಬುಕ್‌ ಪೇಜ್‌ ಕೂಡ ಇದೇ ಫೋಟೋವನ್ನು ಪೋಸ್ಟ್‌ ಮಾಡಿದೆ.

 

ಆದರೆ ನಿಜಕ್ಕೂ ಇದು ಜೆಎನ್‌ಯು ವಿಶ್ವವಿದ್ಯಾಲಯದ ಹಾಸ್ಟೆಲ್‌ ರೂಮ್‌ ಫೋಟೋಗಳೇ ಎಂದು ಆಲ್ಟ್‌ ನ್ಯೂಸ್‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎನ್ನುವುದು ಸ್ಪಷ್ಟವಾಗಿದೆ. ಗೂಗಲ್‌ನಲ್ಲಿ ಇದೇ ರೀತಿಯ ರೂಮಿನ ಫೋಟೋ ಲಭ್ಯವಿದ್ದು, ಸ್ಟುಡೆಂಟ್‌ ಇನ್‌ ಹೌಸಿಂಗ್‌ ಎನ್ನುವ ಪಿಜಿಯದ್ದು ಎಂದು ತಿಳಿದುಬಂದಿದೆ.

Fact Check | ಇವರೆಲ್ಲಾ ಜೆಎನ್‌ಯುನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ?

ಬಳಿಕ ‘ಸ್ಟುಡೆಂಟ್‌ ಇನ್‌ ಹೌಸಿಂಗ್‌’ ಎನ್ನುವ ಫೇಸ್‌ಬುಕ್‌ ಪೇಜ್‌ ಪರಿಶೀಲಿಸಿದಾಗ ಅಲ್ಲಿ ವೈರಲ್‌ ಆಗಿರುವ ಫೋಟೋಗಳೇ ಇರುವುದು ಕಂಡುಬಂದಿದೆ. ಅಲ್ಲದೆ ಆಲ್ಟ್‌ನ್ಯೂಸ್‌ ಜೆಎನ್‌ಯು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅಲ್ಲಿನ ರೂಮುಗಳ ಫೋಟೋ ಪಡೆದಿದ್ದು, ಜೆಎನ್‌ಯು ಹಾಸ್ಟೆಲ್‌ ರೂಮುಗಳು ಇಷ್ಟೊಂದು ಸೌಲಭ್ಯಭರಿತವಾಗಿಲ್ಲ.

ಕಳೆದೊಂದು ವಾರದಿಂದ ಹಾಸ್ಟೆಲ್‌ ರೂಮಿನ ಶುಲ್ಕ ಏರಿಕೆ ಖಂಡಿಸಿ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ಕುರಿತಾಗಿ ಅನೇಕ ಸುಳ್ಳುಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

- ವೈರಲ್ ಚೆಕ್