ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಕಟ್ಟಿಕೊಳ್ಳಲಾಗಿತ್ತು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರೊಂದಿಗೆ ಲಗತ್ತಿಸಲಾಗಿರುವ ಫೋಟೋದಲ್ಲಿ ಹಿಜಾಬ್‌ ಮೇಲೆ ಬ್ಯಾಡೇಜ್‌ ಸುತ್ತಿರುವ ಮತ್ತು ಶರ್ಟಿನ ತೋಳುಗಳ ಮೇಲೆ ಬ್ಯಾಂಡೇಜ್‌ ಸುತ್ತಿರುವ ದೃಶ್ಯವಿದೆ. ಇದನ್ನು ಪೋಸ್ಟ್‌ ಮಾಡಿ, ಪೊಲೀಸರು ಆಕ್ರಮಣ ಮಾಡಿದ್ದಾರೆಂದು ಸುಳ್ಳು ಕತೆ ಕಟ್ಟುವ ನೆಪದಲ್ಲಿ ಆದ ಅಪಸವ್ಯ ಎಂದು ಗೇಲಿ ಮಾಡಿ ಒಕ್ಕಣೆ ಬರೆಯಲಾಗುತ್ತಿದೆ.

ಬಾಂಗ್ಲಾ ವಿಡಿಯೋ ಹಾಕಿ ಭಾರತದ್ದು ಎಂದ ಇಮ್ರಾನ್: ಟ್ವೀಟ್ ಟ್ಯಾಗ್ ಬ್ಲಾಕ್!

ಈ ಚಿತ್ರಗಳು ಸೋಷಿಯಲ್‌ ಮೀಡಿಯಾಗಳಲಲಿ ಬಾರೀ ವೈರಲ್‌ ಆಗುತ್ತಿವೆ. ಡಿಸೆಂಬರ್‌ 15ರಂದು ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪೊಲೀಸರೂ ವಿವಿಯೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು. ಅನಂತರ ಈ ಪೋಟೋಗಳು ವೈರಲ್‌ ಆಗುತ್ತಿವೆ.

 

ಆದರೆ ನಿಜಕ್ಕೂ ಪೊಲೀಸರ ದಾಳಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲು ವಿದ್ಯಾರ್ಥಿಗಳು ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡಿದ್ದರೇ ಎಂದು ಬೂಮ್‌ಲೈವ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ವೈರಲ್‌ ಆಗಿರುವ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಜಾಮಿಯಾ ಮಿಲಿಯಾ ವಿವಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಮಹಮ್ಮದ್‌ ಮಿನ್ಹಾಜುದ್ದೀನ್‌ ಎಂಬ ವಿದ್ಯಾರ್ಥಿ ಒಂದು ಕಣ್ಣನ್ನು ಕಳೆದುಕೊಂಡಿದ್ದ.

ಈ ಘಟನೆ ನಡೆದ ಬಳಿಕ ಡಿ.29ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಣ್ಣಿಗೆ ಬ್ಯಾಂಡೇಜ್‌ ಸುತ್ತಿಕೊಂಡು ಪೊಲೀಸರ ಕ್ರೌರ‍್ಯವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಈ ಕುರಿತ ಹಲವಾರು ಫೋಟೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿವೆ. ಅಲ್ಲಿಗೆ ಸಿಎಎ ಪ್ರತಿಭಟನೆ ವೇಳೆ ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡಿದ್ದರು ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್